ಮತ್ತೆ ಏರಿದ ಶಾಲಾ ಶುಲ್ಕ: ಒಂದೇ ಕಂತಿನಲ್ಲಿ ಕಟ್ಟುವಂತೆ ಒತ್ತಾಯ..!
ಬೆಂಗಳೂರು: ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನು ಕೆಲವ ವಾರಗಳು ಬಾಕಿಯಿದ್ದು, ಈ ನಡುವಲ್ಲೇ ಹೆಚ್ಚಳವಾಗಿರುವ ಶಾಲಾ ಶುಲ್ಕ ಪೋಷಕರ ತಲೆಬಿಸಿಯಾಗಿದೆ.
ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವುದು ಹಾಗೂ ಒಂದೇ ಕಂತಿನಲ್ಲಿ ಕಟ್ಟುವಂತೆ ಒತ್ತಡ ಹೇರುತ್ತಿರುವುದು ಪೋಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾಸಗಿ ಶಾಲೆಗಳು 2023-24ನೇ ಸಾಲಿನಿಂದ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ಹಿಂದಿನ ವರ್ಷಕ್ಕಿಂತ ಈ ವರ್ಷ 25 ರಿಂದ 30 ಪ್ರತಿಶತ ಶುಲ್ಕ ಹೆಚ್ಚಳ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೋಶಕರು ಬಿಇಒ ಸಂಪರ್ಕಿಸುತ್ತಿದ್ದು, ಸಮಸ್ಯೆಗೆ ಪರಿಹರಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ರೀತಿ ಶುಲ್ಕ ಹೆಚ್ಚಳ ಮಾಡಿರುವುದು ಅಸಂವಿಧಾನಿಕ. ಶುಲ್ಕ ಹೆಚ್ಚಳ ಮಾಡಬೇಕಾದರೆ ವೈಜ್ಞಾನಿಕ ಕಾರಣ ಕೊಟ್ಟು ಶಿಕ್ಷಣ ಇಲಾಖೆಗೆ ಪತ್ರ ಬರೆಯಬೇಕು. ಇಲಾಖೆ ಅನುಮತಿ ಕೊಟ್ರೆ ಮಾತ್ರ ಶುಲ್ಕ ಹೆಚ್ಚಳ ಮಾಡಬಹುದು. ಈಗಾಗಲೇ 17 ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಕಾನೂನು ಜಾರಿಯಲ್ಲಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಕಾನೂನು ಬರಬೇಕು ಎಂದು ಪೋಷಕ ಸಮನ್ವಯ ಸಮಿತಿ ಅಧ್ಯಕ್ಷ ದಯಾನಂದ್ ಅವರು ಹೇಳಿದ್ದಾರೆ.
ಶಾಲಾ ಆಡಳಿತ ಮಂಡಳಿಯು ಸಿಬ್ಬಂದಿಗೆ ವಾರ್ಷಿಕವಾಗಿ ವೇತನ ನೀಡದಿದ್ದರೆ, ವರ್ಷ ಪ್ರಾರಂಭವಾಗುವ ಮೊದಲೇ ಪೋಷಕರು ಇಡೀ ವರ್ಷದ ಶುಲ್ಕವನ್ನು ಏಕೆ ಪಾವತಿಸಬೇಕು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ವೇತನವನ್ನು ಮಾಸಿಕ ಆಧಾರದ ಮೇಲೆ ಶಾಲೆಗಳು ನೀಡುತ್ತವೆ. ಶಾಲೆಗಳು ಈ ವಾರ್ಷಿಕ ಪಾವತಿಯ ನಿಯಮವನ್ನು ಪೋಷಕರ ಮೇಲೆ ಹೇರುತ್ತಿರುವುದೇಕೆ? ಕೋವಿಡ್ ನಂತರ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಲಾಗುತ್ತಿದೆ. ಪೋಷಕರ ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸುತ್ತಿಲ್ಲ. ಶೇ.90ರಷ್ಟು ಶಾಲೆಗಳು ಶುಲ್ಕರಚನೆಯ ನಿಯತಾಂಕಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. 2024-25 ಶೈಕ್ಷಣಿಕ ವರ್ಷದಲ್ಲಿ ಒಂದು ಮಗುವಿನ ಶಾಲಾ ಶುಲ್ಕ 1.5 ಲಕ್ಷ ರೂ ಆಗಿದೆ. ಈ ರೀತಿ ಶುಲ್ಕ ಹೆಚ್ಚಳ ಮಾಡಿದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹೇಗೆ? ಸಾಕಷ್ಟು ಕುಟುಂಬಗಳು ಇನ್ನೂ ಕೋವಿಡ್ ಸಂಕಷ್ಟದಿಂದ ಹೊರ ಬಂದಿಲ್ಲ ಎಂದು ಪೋಷಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ ಆಫ್ ಸ್ಕೂಲ್ಸ್ ಇನ್ ಕರ್ನಾಟಕ (ಕ್ಯಾಮ್ಸ್)ದ ಅಧ್ಯಕ್ಷ ಶಶಿ ಕುಮಾರ್ ಅವರು ಮಾತನಾಡಿ, ಒಂದೇ ಕಂತಿನಲ್ಲಿ ಕಟ್ಟುವಂತೆ ಸೂಚಿಸಿರುವ ನಿರಧಾರ ಆಯಾ ಶಾಲೆ ಹಾಗೂ ಆಡಳಿತ ಮಂಡಳಿ ತೆಗೆದುಕೊಂಡಿರುವುದಾಗಿದೆ. ಶಾಲೆಗಳು ಒಂದೇ ಬಾರಿ ಶುಲ್ಕ ಸಂಗ್ರಹಿಸುವುದನ್ನು ನಿರ್ಬಂಧಿಸಲು ಯಾವುದೇ ಆದೇಶ-ನಿಯಮಗಳಿಲ್ಲ ಎಂದು ಹೇಳಿದ್ದಾರೆ.