ಮುಂದಿನ7 ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರಿ ಮಳೆ: ಇಲ್ಲಿದೆ ಸಂಪೂರ್ಣ ಮಾಹಿತಿ
ನವದೆಹಲಿ: ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಇಷ್ಟು ದಿನ ಬೇಸಿಗೆಯ ಬಿರುಬಿಸಿಕಿನ ತಾಪಮಾನ ಹೆಚ್ಚಾಗಿದ್ದು, ಇದೀಗ ದೇಶದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನರು ಅನೇಕ ರಾಜ್ಯಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ಕೇರಳ ಮತ್ತು ಮಾಹೆ, ಕರಾವಳಿ ಮತ್ತು ದಕ್ಷಿಣ ಒಳ ಕರ್ನಾಟಕದಲ್ಲಿ ಮೇ 16ರಿಂದ ಮೇ 19 ಮತ್ತು ಮೇ 16 ರಂದು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಇನ್ನೂ ನಿರಂತರವಾಗಿ ಅನೇಕ ರಾಜ್ಯಗಳಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಮುಂದಿನ ಏಳು ದಿನಗಳಲ್ಲಿ ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಜೊತೆಗೆ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು, ಮೇ 18 ಮತ್ತು ಮೇ 19 ರಂದು ತಮಿಳುನಾಡಿನಲ್ಲಿ ಮತ್ತು ಮೇ 19, 2024 ರಂದು ಕೇರಳದಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಮೇ 17 ರಿಂದ ಮೇ 19, 2024 ರವರೆಗೆ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರತ್ಯೇಕ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮೇ 16ರಿಂದ ಮೇ 19 ತನ ಅರುಣಾಚಲ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಹೇಳಿದೆ. ಇನ್ನೂ ನೈಋತ್ಯ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಭಾಗಗಳಿಗೆ ಮೇ 19, 2024 ರ ಸುಮಾರಿಗೆ ಮುನ್ನುಗ್ಗುವ ಸಾಧ್ಯತೆಯಿದೆ.