ಮೇ 31ರ ಮೊದಲು HSRP ನಂಬರ್ ಪ್ಲೇಟ್ ಬದಲಾವಣೆ ಮಾಡಿಲ್ವಾ? ಇಲ್ಲದಿದ್ದರೆ 1 ಸಾವಿರ ರೂಪಾಯಿ ದಂಡ
ವಾಹನ ಸವಾರರಿಗೆ ಎಚ್‌ಎಸ್‌ಆರ್‌ಪಿ (HSRP Plate) ನಂಬರ್ ಪ್ಲೇಟ್‌ನ ಅಳವಡಿಸಿಕೊಳ್ಳಲು ಡೆಡ್‌ಲೈನ್ ಕೊಟ್ಟು.. ಕೊಟ್ಟು.. ಕೊಟ್ಟು.. ಕರ್ನಾಟಕ ಸರ್ಕಾರ ಸುಸ್ತಾಗಿ ಹೋಗಿದೆ. ಆದ್ರೂ ವಾಹನ ಸವಾರರಿಗೆ ಈ ವಿಚಾರದ ಗಂಭೀರತೆ ಅರ್ಥ ಆಗಿಲ್ಲ, ಈ ಕಾರಣಕ್ಕೆ ಕರ್ನಾಟಕ ಸರ್ಕಾರ ಖಡಕ್ ಕ್ರಮವನ್ನ ಕೈಗೊಳ್ಳಲು ಮುಂದಾಗಿದೆ! ನಿಯಮ ಮೀರಿದ ವಾಹನ ಸವಾರರಿಗೆ ಭಾರಿ ಸಂಕಷ್ಟ ಎದುರಾಗಿದೆ.
ಎಚ್‌ಎಸ್‌ಆರ್‌ಪಿ ಅಂದ್ರೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಧುನಿಕ ಜಗತ್ತಲ್ಲಿ ಹೊಸ ಕ್ರಾಂತಿ ಮಾಡುತ್ತಿದೆ. ಇದು ಅಲ್ಯುಮಿನಿಯಂ ಲೋಹದ ಮೂಲಕ ತಯಾರಿಸಿದ ಪ್ಲೇಟ್ ಆಗಿದೆ. ಹೊಸ ವಾಹನಗಳಲ್ಲಿ ಈ ರಿತಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಕೆ ಆಗುತ್ತಾ ಬಂದಿದ್ದು, ಹೊಸ ನಂಬರ್ ಪ್ಲೇಟ್‌ಗಳಲ್ಲಿ ಇಂಗ್ಲಿಷ್ ಅಕ್ಷರ ಸೇರಿದಂತೆ ನಂಬರ್ಸ್ ಉಬ್ಬಿಕೊಂಡಿರುವ ರೀತಿ ಪ್ರಿಂಟ್ ಆಗಿರುತ್ತವೆ. ಈ ಪ್ಲೇಟ್ ಅಳವಡಿಸುವಾಗ 2 ಲಾಕ್ ಪಿನ್ ಹಾಕಿರ್ತಾರೆ ಪೇಪರ್‌ಗಳ ಸ್ಟೆಪ್ಲರ್ ಪಿನ್ ಮಾಡುವಾಗ ಪಂಚ್ ಮಾಡುವ ರೀತಿಯಲ್ಲಿ ಹೊಸ ನಂಬರ್ ಪ್ಲೇಟ್ ವಾಹನಕ್ಕೆ ಅಂಟಿಸಿರ್ತಾರೆ ಎಂಬುದು ವಿಶೇಷ. ಆದ್ರೆ ಈ ಆತ್ಯಾಧುನಿಕ ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿಸುತ್ತಿದ್ದಾರೆ, ಹೀಗಾಗಿ ಸರ್ಕಾರ ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿದೆ.
ರಾಜ್ಯದಲ್ಲಿ 2 ಕೋಟಿ ವಾಹನ!
ರಾಜ್ಯದಲ್ಲಿ 2 ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎನ್ನಲಾಗಿತ್ತು. ಹೀಗಾಗಿಯೇ 3 ಬಾರಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಕೊನೆಯ ಬಾರಿ ಅಂತಾ, ಮೇ 31 ರ ಡೆಡ್‌ಲೈನ್ ಕೊಟ್ಟು ಕರ್ನಾಟಕ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಆದೇಶ ನೀಡಿತ್ತು. ಹೀಗಿದ್ದರೂ 2 ಕೋಟಿ ವಾಹನಗಳ ಪೈಕಿ, ಕೇವಲ 35 ಲಕ್ಷ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ವಾಹನ ಸವಾರರಿಗೆ ದಂಡದ ಆಘಾತ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ.
1 ಸಾವಿರ ರೂಪಾಯಿ ದಂಡ
ಅಕಸ್ಮಾತ್ ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ. ಮೇ 31ಕ್ಕೆ ಈ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಎಚ್‌ಎಸ್‌ಆರ್‌ಪಿ ನಿಯಮ ಮೊದಲ ಬಾರಿ ಉಲ್ಲಂಘನೆಗೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಾರೆ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ 1 ಸಾವಿರ ರೂಪಾಯಿ ದಂಡ ಗ್ಯಾರಂಟಿ ಆಗಿದೆ.