ಶಹಾಪುರಃ ನಗರಸಭೆಯಲ್ಲಿ ಈ ಹಿಂದೆ ನಡೆದ ಅಕ್ರಮ ಬಯಲಿಗೆಳೆಯಲು ತನಿಖಾ ತಂಡ ರಚನೆ
ಶಹಾಪುರ ನಗರಸಭೆಗೆ ತನಿಖಾ ತಂಡ ಆಗಮಿಸುವ ಸಾಧ್ಯತೆ.!
ಯಾದಗಿರಿ: ಜಿಲ್ಲೆಯ ಶಹಾಪುರ ನಗರಸಭೆಯಲ್ಲಿ ಹಿಂದಿನ ಪೌರಾಯುಕ್ತ ರಮೇಶ ಪಟ್ಟೇದಾರ ಅಧಿಕಾರವಧಿಯಲ್ಲಿ ಹಲವು ಬಿಲ್‍ಗಳಿಗೆ ಜಿಲ್ಲಾಡಳಿತ, ನಗರಸಭೆ ಆಡಳಿತಾಧಿಕಾರಿಯ ಅನುಮೋದನೆ ಪಡೆಯದೆ ಹಲವಾರು ಬಿಲ್‍ಗಳ ಮೇಲೆ ರುಜು ಮಾಡಿ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಆದೇಶ ಅನ್ವಯ ಜಿಲ್ಲಾ ನಗರಾಭಿವೃದ್ಧಿ ಕೋಶ ಸಹಾಯಕ ಕಾರ್ಯಪಾಲಕ ಅಭಿಯಂತರ ನೇತೃತ್ವದ ತನಿಖಾ ತಂಡ ನಗರಸಭೆಗೆ ಗುರುವಾರ ಆಗಮಿಸಲಿದೆ.
ನಗರಸಭೆಯಲ್ಲಿ ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಹಲವಾರು ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಜೆ.ಮಂಜುನಾಥ ಅವರು, ಹಿಂದಿನ ಪೌರಾಯುಕ್ತರು ಸಹಿ ಮಾಡಿ ವಿವಿಧ ಬಿಲ್‍ಗಳ ಹಣ ಪಡೆದುಕೊಂಡಿರುವ ಕುರಿತು ಮಾಹಿತಿ ದೊರೆತಿದ್ದು, ಸಮರ್ಪಕ ತನಿಖೆ ನಡೆಸಿ ವರದಿ ಒಪ್ಪಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರಸಭೆಗೆ ಆಗಮಿಸುತ್ತಿರುವ ತನಿಖಾ ತಂಡ ಹಿಂದಿನ ಪೌರಾಯುಕ್ತರ ವಿರುದ್ಧ ಇರುವ ಹಲವು ಕಡತಗಳ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ರಮೇಶ ಪಟ್ಟೇದಾರ ಅವರ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದ ವಿವಿಧ ಕಡತಗಳ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಕೆಲವು ಕಡತಗಳಿಗೆ ಅನುಮೋದನೆ ಪಡೆಯದೆ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ಇನ್ನೆಷ್ಟು ಕಡತಗಳು ಸಿಗಲಿವೆ ಎಂಬುದು ಕಾದು ನೋಡಬೇಕು ಎಂದು ನಗರಸಭೆ ಸದಸ್ಯ ವಸಂತ ಸುರಪುಕರ್ ತಿಳಿಸಿದ್ದಾರೆ.
ಒಟ್ಟಾರೆ ಆಗಮಿಸುವ ತನಿಖಾ ತಂಡು ಪ್ರಾಮಾಣಿಕವಾಗಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೂಡಿದ್ದ ಗೊಂದಲಗಳಿಗೆ ತೆರೆ ಎಳೆಯಬೇಕಿದೆ. ಅಲ್ಲದೆ ತಪ್ಪಿಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಕಾನೂನು ಗೌರವತೆ ಹೆಚ್ಚಿಸಬೇಕಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತು ಪಡಿಸಬೇಕಿದೆ.