
ಮಧುರ ಭಾವ
ಕತ್ತಲೆಯಲ್ಲೂ ಬೆಳಕು ಕಂಡುಕೊಂಡ ಮಧುರ ಭಾವದ ಪಕ್ಷಿ
ಒಂದು ವಿಶಾಲವಾದ ಮರವಿತ್ತು, ಅದರ ಹೊದರಿನಲ್ಲಿ ಗೂಬೆಯು ವಾಸಮಾಡಿತ್ತು. ಮರದ ಮೇಲೆ ನೂರಾರು ಪಕ್ಷಿಗಳು, ಹಗಲೆಲ್ಲ ಹಾಡಿ-ಪಾಡಿ, ನಕ್ಕು ನಲಿದು ಹಾರಾಡಿಕೊಂಡಿದ್ದವು. ಗೂಬೆಯು ದಿನವಿಡೀ ಕತ್ತಲೆಯ ಹೊದರಿನಲ್ಲಿ ಕಾಲ ಕಳೆಯುತ್ತಿತ್ತು. ರಾತ್ರಿ ಮಾತ್ರ ಹೊರಗೆ ಬರುತ್ತಿತ್ತು, ಉಳಿದ ಪಕ್ಷಿಗಳಂತೆ ಅದಕ್ಕೆ ಹಗಲಿನ ಸಂತಸವಿರಲಿಲ್ಲ.
ಒಂದು ದಿನ ಒಂದು ಪಕ್ಷಿ ಗೂಬೆಗೆ “ದೇವರು ನಿನಗೆಷ್ಟು ಅನ್ಯಾಯ ಮಾಡಿದನಲ್ಲ? ಹಗಲಿನಲ್ಲಿ ಎಂಥ ಭವ್ಯ ಬೆಳಕು. ಆ ಬೆಳಕಿನಲ್ಲಿ ಎಂಥ ಸುಂದರ ಜಗತ್ತು? ಅದನ್ನೆಲ್ಲ ನೋಡುವ ಕಣ್ಣನ್ನೇ ದೇವರು ನಿನಗೆ ಕೊಡಲಿಲ್ಲವಲ್ಲ!!” ಕೇಳಿತು.
ಗೂಬೆ- “ಗೆಳೆಯನೇ ಹಾಗೆನ್ನದಿರು. ದೇವರು ನಿನಗೊಂದು ರೀತಿಯ ಸುಂದರ ಬದುಕನ್ನು ಕರುಣಿಸಿದ್ದಾನೆ. ನನಗೊಂದು ರೀತಿಯ ಸುಂದರ ಬದುಕನ್ನು ಕರುಣಿಸಿದ್ದಾನೆ !” ಎಂದಿತು.
ಪಕ್ಷಿಯು ಆಶ್ಚರ್ಯದಿಂದ “ನಮ್ಮದೇನೋ ಸುಂದರ ಜೀವನ ನಿಜ, ನಿನ್ನದು ಹೇಗೆ ಸುಂದರ ??” ಕೇಳಿತು.
ಗೂಬೆ – “ನಿಮಗೆ ಬೆಳಕಿನಲ್ಲಿ ಬಳಕೆಗೆ ಬರುವ ಕಣ್ಣುಗಳಿವೆ. ನನಗಾದರೋ ಕತ್ತಲೆಯಲ್ಲೂ ಬೆಳಕನ್ನು ಕಾಣುವ ಕಣ್ಣುಗಳಿವೆ. ಹಗಲೆಲ್ಲಾ ನಿಮ್ಮ ಧ್ವನಿಯನ್ನು ಕೇಳಿ ಸಂತಸಪಡುತ್ತೇನೆ, ರಾತ್ರಿಯಲ್ಲಾ ಸೃಷ್ಟಿಯ ಸೊಬಗನ್ನು ಸವಿದು ಆನಂದಿಸುತ್ತೇನೆ ! ಹಗಲು-ರಾತ್ರಿ ಎರಡನ್ನೂ ಅನುಭವಿಸುವ ನನ್ನ ಜೀವನ ನಿಮಗಿಂತಲೂ ಸುಂದರ !” ಹೇಳಿತು. ಗೂಬೆಯ ಈ ಮಧುರ ಭಾವನೆ ಅದು ಅಹಿಂಸೆಯ ಪ್ರತೀಕ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.