ಮಹಿಳಾ ವಾಣಿ

ಜಲ್ದಿ ಹೆಣ್ಣು ಮಕ್ಕಳ ಮದುವಿ ಮಾಡಿ ಗಂಡನ ಮನಿಗೆ ಕಳಿಸಿದರಾಯ್ತು ಅನ್ನೋದ್ಯಾಕ?

ಹೆಣ್ಣುಮಕ್ಕಳ ಬಾಳಲಿ ಮದುವೆ ಎಂಬುದೊಂದು ಹೊಸ ಮನ್ವಂತರ… ಆದರೆ…

ಗೌರಿ ಓದಿನಲ್ಲಿ ತುಂಬಾ ಬುದ್ಧಿವಂತೆ.ಹಾಗಂತ ಅವಳ ಬಗ್ಗೆ ಹೆಮ್ಮೆ ಪಡೋಕೂ ಪುರಸೊತ್ತಿಲ್ಲ ಅವಳ ಹೆತ್ತವರಿಗೆ. ತುತ್ತಿನ ಚೀಲ ತುಂಬಿಸೋಕೆ ಅವರಿಬ್ಬರೂ ದಿನವೆಲ್ಲ ಮನೆಯಾಚೆನೆÉ ಇರ್ತಾರೆ. ಹೀಗಿದ್ದಾಗ್ಯೂ ಅವಳು ಫಸ್ಟ ಪಿಯುಸಿಯಲ್ಲಿ ನೈಂಟಿ ಫೈ ಪರ್ಸಂಟೇಜ್ ಮಾಡಿ ಕಾಲೇಜಿಗೆ ಫಸ್ಟ್ ಬಂದಾಳ. ಅವಳ ಸಾಧನೆ ನೋಡಿ ಲೆಕ್ಚರರ್ಸ್ ಎಲ್ಲಾ ಅವಳಿಗೆ ಪ್ರಾಪರ್ ಗೈಡನ್ಸ್ ಸಿಕ್ರ ಐಎಎಸ್‍ನಂಥ ಪರೀಕ್ಷೆನೂ ಈಜಿಯಾಗಿ ಪಾಸಾಗ್ತಾಳ. ಎಂದು ಹೆಮ್ಮೆಯಿಂದ ಚರ್ಚಿಸಿದೆವು. ಅವಳನ್ನು ವಿಚಾರಿಸಿದಾಗ ಡಿಸಿಯಾಗಬೆಕು ಅನ್ನೋದು ನನ್ನ ಜೀವನದ ಗುರಿ ಎಂದಳು. ಆ ಉತ್ತರ ಕೇಳಿ ನನ್ನ ಮನಸ್ಸು ಹಕ್ಕಿಯಾಗಿ ಬಾನೆತ್ತರಕ್ಕೆ ಹಾರಿತು.

ಜಯಶ್ರೀ.ಜೆ. ಅಬ್ಬಿಗೇರಿ, ಲೇಖಕಿ

ಗೌರಿಯ ಕ್ಲೋಸ್ ಪ್ರೆಂಡ್ ಪ್ರಿಯಾಂಕಳದು ತುಂಬಾ ಆಕರ್ಷಕ ವ್ಯಕ್ತಿತ್ವ ಕಾಲೇಜಿನಲ್ಲಿ ಯಾವುದೇ ಫಂಕ್ಷನ್ ಇದ್ರೂ ಅವಳದೇ ನಿರೂಪಣೆ. ಫಂಕ್ಷನ್‍ಗೆ ಬಂದ ಅತಿಥಿಗಳೆಲ್ಲ ಅವಳ ಮಾತಿನ ಶೈಲಿಗೆ, ವಾಗ್ಝರಿಗೆ ಬೆರಗಾಗುತ್ತಿದ್ದರಲ್ಲದೆ ಇವಳು ಹೀಗೇ ಮುಂದುವರೆದರೆ ಫೇಮಸ್ ನಿರೂಪಕಿ ಆಗೋದ್ರಲ್ಲಿ ಡೌಟೇ ಇಲ್ಲ ಅಂತ ಭವಿಷ್ಯ ನುಡಿಯದೇ ಇರುತ್ತಿರಲಿಲ್ಲ. ಅವಳಿಗೂ ಟಿವಿಯಲ್ಲಿ ನಿರೂಪಕಿಯಾಗ್ಬೇಕು ಅನ್ನೋ ಹುಚ್ಚು ಇದ್ದೇ ಇತ್ತು.
ರೂರಲ್ ಏರಿಯಾದಾಗ ಸಾಯಿನ್ಸ್ ತುಗೊಂಡು ಪಾಸಾಗೋದು ಅಂದ್ರ ಒಂದು ದೊಡ್ಡ ಯುದ್ಧ ಗೆದ್ದಂಗ. ಅಂಥದ್ರೊಳಗ ಕೀತಿ ಸೆಕೆಂಡ್ ಪಿಯು ಪಿಸಿಎಂಬಿಯೊಳಗ ನೈಂಟಿ ಸಿಕ್ಸ್ ಪರ್ಸಂಟ್ ಮಾಡ್ಯಾಳ ಅಂತ ಸುದ್ದಿ ಕೇಳಿದ ಸಿಬಿಸಿ ಮೇಂಬರ್ ಕೀರ್ತಿ ಮುಂದಿನ ಎಜುಕೇಶನ್ನಿಗೆ ಎಷ್ಟ ಖರ್ಚು ಬಂದ್ರೂ ನಾನ ನೋಡ್ಕೊಳ್ತಿನಿ ಅಂತ ಕಾಲೇಜಿಗೆ ಖುದ್ದಾಗಿ ಭೇಟಿ ಕೊಟ್ಟು ವಾಗ್ದಾನ ಮಾಡಿ ಹೋದ್ರು. ಇದನ್ನು ಕೇಳಿದ ನಾವು ಕೀರ್ತಿ ಡಾಕ್ಟರ್ ಆಗೋ ಕನಸು ನನಸು ಆದಂಗ ಸಂತಸಪಟ್ಟೆವು.

ಬೇಸಿಗೆ ಸೂಟಿ ಕಳೆದು ಎಡ್ಮಿಷನ್ ಸ್ಟಾರ್ಟ್ ಆದ್ರೂ ಗೌರಿ, ಪ್ರಿಯಾಂಕಾ ಕಾಲೇಜ ಕಡೆ ಸುಳಿಲೇ ಇಲ್ಲ. ಫೀಜಿನ ತೊಂದ್ರೆ ಇರ್ಬಹುದು,ಅಂತ ಗೆಸ್ ಮಾಡಿ ಹಂಗೇನಾದ್ರು ಇದ್ರ ನಾವ ಫೀಜು ಕಟ್ಟಿದರಾಯ್ತು ಅಂತ ಡಿಸಿಜನ್ ಪಾಸ್ ಮಾಡ್ಕೊಂಡು ವಿದ್ಯಾರ್ಥಿಗಳನ್ನು ಕೇಳಿದಾಗ ಅವರ ಉತ್ತರಗಳು ನಮ್ಮನ್ನು ದಿಗ್ಭ್ರಾಂತಗೊಳಿಸಿದ್ದವು.  ಗೌರಿಗೆ ಸೂಟಿಯೊಳಗೆ ಮದುವಿ ಆಯ್ತು ಆಕಿ ಎಷ್ಟ ಬ್ಯಾಡ ಅಂತ ಅತ್ರೂ ಅವರಪ್ಪಾ ಕೇಳಲೇ ಇಲ್ಲ. ಪ್ರಿಯಾಂಕಾಂದು ಅವರ ಸೋದರ ಮಾವನ ಜೊತಿ ಎಂಗೇಂಜಮೆಂಟ್ ಆಗೈತಿ. ಅವರ ಮಾವ ಮುಂದ ಕಲಿಯುದು ಬ್ಯಾಡ ಅನ್ನಾಕತ್ಯಾನಂತ್ರಿ .ಅಕಿ ಜ್ವರ ಬಂದು ಮಲ್ಕೊಂಡಾಳ್ರಿ  ಎಂದು ಹೇಳುವಾಗ ಆ ಹುಡುಗಿಯರ ಕಣ್ಣುಗಳ ಅಂಚಲ್ಲಿ ನೀರು ಜಿನುಗಿತ್ತು.

ಇನ್ನು ಕೀರ್ತಿಯಾದ್ರೂ ಎಮ್ ಬಿ ಬಿ ಎಸ್ ಸೇರಿದಳೇನೋ ಅಂತ ವಿಚಾರಿಸಿದಾಗ ಅವರ ಪಾಲಕರು ಸಿಟಿಗೆ ಅಕಿನ್ನ ಒಬ್ಬಕಿನ್ನ ಹೆಂಗ ಕಳ್ಸುದು? ಅಕಿದು ಈ ವರ್ಷ ಮದುವಿ ಮಾಡ್ತೆವಿ ಬೇಕಂದ್ರ ಅಕಿ ಗಂಡ ಮುಂದ ಅಕಿನ್ನ ಡಾಕ್ಟರತಿ ಮಾಡವಲ್ನಕ ಎಂಬ ಸುದ್ದಿ ಕೇಳಿ ಬರಸಿಡಿಲು ಬಡಿದಂಗಾಯ್ತು. ಇವು ಹಳ್ಳಿಯೊಳಗ ಮತ್ತು ಸಿಟಿಯೊಳಗ ಕೂಲಿ ಮಾಡುವ ಮತ್ತು ಫ್ಯಾಕ್ಟರಿ ಕೆಲಸ ಮಾಡುವ ಪಾಲಕರ ಹೆಣ್ಮಕ್ಕಳು ಶಿಕ್ಷಣ ಮೊಟಕುಗೊಳಿಸಿ ಮದುವಿ ಮಾಡುವ ಕೆಲವು ಸ್ಯಾಂಪಲ್ ಮಾತ್ರ ನಮ್ಮ ಸಮಾಜದೊಳಗ ದಿನ ನಿತ್ಯ ನಡೆಯುವಂತ ಇಂಥ ಘಟನೆ ಕೇಳಿದಾಗ ಎದೆಯಲ್ಲಿ ತಣ್ಣೀರು ಸುರುವಿದಂಗೆ ಆಗುತ್ತೆ.  ಬೆಟ್ಟದಷ್ಟು ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ತಾವೂ ಇತರ ಹೆಣ್ಣು ಮಕ್ಕಳ ತರ ತಮ್ಮ ಕೆಪ್ಯಾಸಿಟಿಯಿಂದ ಏನಾದ್ರೂ ಸಾಧಿಸಬೇಕು. ಸಮಾಜದಾಗ ತಮ್ಮ ಮನೆತನದ ಮರ್ಯಾದೆ ಹೆಚ್ಚಿಸಬೇಕು. ಆರ್ಥಿಕವಾಗಿ ಸಬಲರಾಗಿ ಬಾಳಬೇಕು ಅನ್ನೋ ಹಂಬಲದಾಗಿರುವ ಹೆಣ್ಣು ಮಕ್ಕಳನ ಹಿಂಗ ನಡು ನೀರಾಗ ನಿಲ್ಲಿಸೋ ಪಾಲಕರಿಗೆ ಮಕ್ಕಳ ಮನದಾಸೆ, ತುಡಿತ ಯಾಕೆ ಅರ್ಥವಾಗೋದಿಲ್ಲ. ತಮ್ಮ ವಂಶದ ಕುಡಿಗಳನ್ನು ಬೆಳೆಯುವ ಮುನ್ನವೇ ಹೀಗೆ ಏಕೆ ಚೂಟಿ ಒಗೆಯುತ್ತಾರೆ ಪಾಲಕರು ಹೆಣ್ಣು ಮಕ್ಕಳ ಮದುವೆಗೆ ಇಷ್ಟೇಕೆ ಅವಸರ ಮಾಡತ್ತಾರೆ ಎನ್ನುವ ಪ್ರಶ್ನೆಗಳ ಬೆನ್ನು ಹತ್ತಿದರೆ ಸಿಗುವ ಉತ್ತರಗಳು ಬಹಳ ವಿಚಿತ್ತ ಅನಿಸುತ್ತವೆ.

• ಹೆಣ್ಮಕ್ಳನ ಸಣ್ಣ ವಯಸ್ಸಿನ್ಯಾಗ ಮದುವಿ ಮಾಡಬೇಕು ಇಲ್ದಿದ್ರ ವಯಸ್ಸಾದೆಂಗೆಲ್ಲ ವರ ಹೂಂ ಅನ್ನುದಿಲ್ಲ.

• ನಮ್ಮ ಮಗಳ ಜೊತಿ ಕಲಿತವರದೆಲ್ಲ ಮದುವಿಯಾಗಿ ಮಕ್ಕಳು ಆಗಾಕ ಹತ್ಯಾವು ನಾವು ನಮ್ಮಗಳನ ಕಲಿಯೂದ ಬಿಡಿಸಿ ಮದವಿ ಮಾಡಬೇಕು. ಇಲ್ದಿದ್ರ ಮುಮದ ನಮಗ ತೊಂದ್ರಿ.
• ನಮ್ಮವ್ವಗ/ ಅಪ್ಪಗ ಬಾಳ ಆರಾಮ ಇಲ್ಲ ಮೊಮ್ಮಗಳ ಮದವಿ ನೋಡಿ ಸಾಯಬೇಕು ಅಂತ ಹಟ ಹಿಡಿದಾಳ/ನ
• ಬಾಳ ಕಲತ ವರ ನಮ್ಮ ಮಂದ್ಯಾಗ ಸಿಗುದಿಲ್ಲ. ಅದಕ್ಕ ಕಲ್ಸೂದು ಬಿಡಿಸಿ ಮದುವಿ ಮಾಡಬೇಕು.
• ಮನ್ಯಾಗ ಸೋದರ ಮಾವ ಅದಾನ ನಾವು ನಮ್ಮ ಮಗಳನ ಕೊಡದಿದ್ರ ಅಂವ ಹೊರಗಿನ ಕನ್ಯಾ ಮದುವಿ ಆಗ್ತಾನ.
• ವಯಸ್ಸು ಹೆಚ್ಚಾದಂಗೆಲ್ಲ ಮುಖ ಬಲತಂಗ ಕಾಣ್ಷತ್ತ ವರದಕ್ಷಿಣೆ ಹೆಚ್ಚು ಡಿಮ್ಯಾಂಡ ಮಾಡ್ತಾರ.ಅದಕ ಎಳಕ ಇದ್ದಾಗ ಮದವಿ ಮಾಡಿದರ ಚುಲೊ.
• ಮಗಳ್ನ ತಮ್ಮಗ ಕೊಟ್ಟು ತವರ ಮನಿ ಉಳಿಸಿಕೋ ಬೇಕು.
• ತಿಳುವಳಿಕಿ ಬಂತಂದ್ರ ನಾವು ತೋರಿಸಿದ ವರನ್ನ ಮದವಿ ಮಾಡಕೊಳಾಕ ಒಪ್ಪುದಿಲ್ಲ.ಅದು ಅಲ್ಲದ ಪಿರುತಿ ಗಿರುತಿ ಅಂತ ತೆಲಿ ಕೆಡಿಸಿಕೊಂಡು ಮನಿ ಮರ್ಯಾದಿ ಕಳಿತಾರ.
• ನಿಮ್ಮಗಳ ಮದವಿ ಯಾವಾಗ ಮಾಡ್ತಿರಿ? ಬೇಗ ಮಾಡ್ರಿ ಈಗ ಮಾಡುದು ಬಿಟ್ರಿ, ಕೆಟ್ರಿ ಅಂತ ಬಂಧು ಬಾಂಧವರು ಒತ್ತಾಯ ಮಾಡತಾರ.

ಮನ್ಯಾಗ ಎಲ್ಲಾರ ಕೈಯಾಗ ಮೊಬೈಲ್ ಬಂದಾವು. ಅದಲ್ಲದ ಮನಿಗೆ ಕಲರ್ ಟಿವಿ ಬಂದಾವು. ನಮ್ಮಜ್ಜನ ಕಾಲಕ್ಕ ಹೋಲಿಸಿದ್ರ ನಮ್ಮ ಜೀವನ ಬಾಳ ಸುಧಾರಸೈತಿ ನಮ್ಮದು ಹೈಟೆಕ್ ಜೀವನ ಅನ್ನೋ ಪಾಲಕರು ಕೂಡ ತಮ್ಮ ಹೆಣ್ಣು ಮಕ್ಕಳ ಮದುವೆ ವಿಷಯ ಬಂದಾಗ ಮಾತ್ರ ಗೊಡ್ಡು ಸಂಪ್ರದಾಯದ ನಂಬಿಕೆಗೆ ಜೋತು ಬೀಳುತ್ತಾರೆ. ಹೆಣ್ಣುಮಕ್ಕಳನ್ನು ತರಾತುರಿಯಲ್ಲಿ ಹಸೆ ಮಣೆ ಏರಿಸಿ, ಜೀವನ ನರಕ ಮಾಡಿಸಿ, ಮರಗುವ ಪಾಲಕರ ಸಂಖ್ಯೆಗೆ ಕಮ್ಮಿಯೇನಿಲ್ಲ.

ಪರಿಹಾರ: ಮಗಳ ಮನದ ಆಸೆಗಳನ್ನು, ಸಾಮಥ್ರ್ಯವನ್ನು ಅರ್ಥೈಸಿಕೊಳ್ಳಿ.ಅವಳ ಬಾವನೆಗಳಿಗೆ ಬೆಲೆ ಕೊಡಿ.ನಿಮ್ಮ ಜವಾಬ್ದಾರಿ ಮುಗಿಸಿದರಾಯಿತು ಅಂತ ಅವಸರಿಸದೆ, ಅವಳ ಭವಿಷ್ಯದ ಬಗ್ಗೆ ವಿಚಾರ ಮಾಡಿ, ಜವಾಬ್ದಾರಿಯಿಂದ ನಡೆದುಕೊಳ್ಳಿ.ಮದುವೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸನ್ನದ್ಧರಾಗಿದ್ದರೆಯೇ? ಎಂದು ತಿಳಿದುಕೊಳ್ಳಿ. ಮನೆಯ ಹಿರಿಯರ ಆಸೆಯನ್ನು ಮುಂದಿಟ್ಟು ಮಗಳ ಕನಸಿಗೆ ಕಲ್ಲು ಹಾಕಬೇಡಿ. ಮದುವೆಯಗಲು ವಯಸ್ಸಿನ ಕಾನೂನು ನಮ್ಮ ಮಕ್ಕಳ ಒಳಿತಿಗಾಗಿಯೇ ಇದೆ ಎಂದು ಗಟ್ಟಿಯಾಗಿ ನಂಬಿ.
ಮದುವೆ ಎನ್ನುವದು ಪ್ರತಿಯೊಬ್ಬ ಹೆಣ್ಣು ಮಗಳ ಜೀವನದಲ್ಲಿ ಹೊಸ ಮನ್ವಂತರ ಇದ್ದ ಹಾಗೆ ಅದಕ್ಕೆ ಪಾಲಕರೆ ಹೆಣ್ಣುಮಕ್ಕಳ ಮದುವೆಗೆ ಅವಸರ ಬೇಡ. ಶಿಕ್ಷಣ ಜೀವನದ ಬೆಳಕು. ಆ ಬೆಳಕಿನಿಂದ ಅವಳನ್ನು ದೂರ ತಳಿ,್ಳ ಅಜ್ಞಾನದ ಕತ್ತಲೆಯ ಕೂಪಕ್ಕೆ ಬೀಳಿಸಿ, ಅವಳ ಬಾಳು ಹಾಳು ಮಾಡುವದು ಬೇಡ.

ಅವಳ ಸುಂದರ ಕನಸುಗಳಿಗೆ ಇಂಬು ಕೊಟ್ಟು ನೋಡಿ ಅವಳು ಫಿನಿಕ್ಸ ಪಕ್ಷಿಯಂತೆ ಎದ್ದು ಬರುತ್ತಾಳೆ. ಪ್ರತಿ ಹೆಣ್ಣು ಮಗುವನ್ನು ಸಬಲಳನ್ನಾಗಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ಇದನ್ನರಿತು ಅವಳ ಶಿಕ್ಷಣಕ್ಕೆ ರಾಜಮಾರ್ಗ ತೆರೆದು ಹೆಣ್ಣು ಸಮಾಜದ ಕಣ್ಣು ಎಂಬುದನ್ನು ಸಂಪೂರ್ಣವಾಗಿ ನಿಜವಾಗಿಸೋಣ.. ಬನ್ನಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೈ ಜೋಡಿಸೋಣ

-ಜಯಶ್ರೀ. ಅಬ್ಬಿಗೇರಿ (ಬೆಳಗಾವಿ)
ಆಂಗ್ಲ ಭಾಷಾ ಉಪನ್ಯಾಸಕರು,                                                                                                                                              ಹಿರೇಬಾಗೇವಾಡಿ, ತಾ: ಜಿ: ಬೆಳಗಾವಿ

Related Articles

4 Comments

Leave a Reply

Your email address will not be published. Required fields are marked *

Back to top button