ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ
ಯಾದಗಿರಿ, ಶಹಾಪುರಃ ನಗರದ ಸರ್ಕಾರಿ ಆಸ್ಪತ್ರೆಯ ಹಿಂದುಗಡೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2008ರಲ್ಲಿ ನಿರ್ಮಿಸಲಾದ 207 ಮನೆಗಳನ್ನು ಫಲಾನುಭವಿಗಳಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಮ್ಮ ಕಚೇರಿಯಲ್ಲಿ ಹಕ್ಕು ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳ ಹಿಂದೆ ಇಲ್ಲಿನ ನಿರ್ಗತಿಕ ನಿರಾಶ್ರಿತರಿಗಾಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 207 ಮನೆಗಳನ್ನು ನಿರ್ಮಿಸಲಾಗಿತ್ತು. ಹಲವಾರು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಆ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ.
ನಿರಾಶ್ರಿತರ ಪಟ್ಟಿಯನ್ನು ಮಂಡಳಿ ಪರಿಶೀಲಿಸಿ ತಯಾರಿಸಿದ್ದು, ಅದರಂತೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಮನೆಗಳು ಸೂಕ್ತ ನಿರ್ವಹಣೆ ಕೊರತೆಯಿಂದ ಹಲವಾರು ವರ್ಷಗಳು ಖಾಲಿ ಬಿದ್ದಿರುವ ಹಿನ್ನೆಲೆ ವಿದ್ಯುತ್ ಸಂಪರ್ಕ, ಕುಡಿಯುವ ನೀರು ಇತರೆ ಸೌಲಭ್ಯಗಳು ಹಾಳಾಗಿವೆ.
ಕೂಡಲೇ ಎಚ್ಕೆಆರ್ಡಿಬಿ ಅಥವಾ ಶಾಸಕರ ಅನುದಾನದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುದಾನ ಬಂದ ಮೇಲೆ ಆಶ್ರಯ ಕಾಲೊನಿ ಆದರ್ಶ ಕಾಲೊನಿಯಾಗಿ ಪರಿವರ್ತಿಸಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ ನಗರದಲ್ಲಿ ಇನ್ನೂ ಹಲವಾರು ಕುಟಂಬಗಳು ನಿರಾಶ್ರಿತರಿದ್ದು, ಈಗಾಗಲೇ ಸುಮಾರು 13 ಎಕರೆ ಜಮೀನು ಪಡೆಯಲಾಗಿದ್ದು, ಅದರಲ್ಲಿ ಅಲೆಮಾರಿ, ಅರೆ ಅಲೆಮಾರಿ, ಘೀಸಾಡಿ ಜನಾಂಗಕ್ಕೆ 2 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಲಾಗುವುದು. ಒಟ್ಟು ಸುಮಾರು 1100 ಮನೆ ನಿರ್ಮಾಣದ ಗುರಿ ಹೊಂದಿದ್ದು, ಪ್ರಸ್ತುತ 200 ಮನೆಗಳು ಮಂಜೂರಿಯಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ರಾಯಚೂರು ಉಪ ವಿಭಾಗದ ಕಲಬುರಗಿ ಕೊಳಗೇರಿ ಅಭಿವೃದ್ಧಿ ಮಂಡಳಿ ಸಹಾಯಕ ಎಂಜಿನೀಯರ್ ಮಹ್ಮದ್ ಯೂಸುಪ್ ಖಾಜಿ ಮಾತನಾಡಿ, ಇಲಾಖೆಯಿಂದ ಸೂಕ್ತ ಫಲಾನುಭವಿಗಳಿಗೆ ಮನೆ ಮಂಜೂರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಬಡಾವಣೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.