ಕರಾವಳಿ ಕಡೆ ಕಮಲ ನಡೆ; ಕೇಸರಿ ಪಡೆಗೆ ಕಾಂಗ್ರೆಸ್ ತಡೆ!
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರ ಕೊಲೆ ಮತ್ತು ಹಿಂದುತ್ವದ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಯುವಮೋರ್ಚಾ ‘ಮಂಗಳೂರು ಚಲೋ’ ಬೈಕ್ ರ‌್ಯಾಲಿ ಹಮ್ಮಿಕೊಂಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ಬಿಜೆಪಿ ರ‌್ಯಾಲಿ ತಡೆಯಲು ಕಸರತ್ತು ನಡೆಸಿದೆ. ಕೋಮು ಸಂಘರ್ಷ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಇದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ, ಬಿಜೆಪಿ ಬೈಕ್ ರ‌್ಯಾಲಿ ಮಾಡುವುದು ಒಳ್ಳೆಯದಲ್ಲ. ಬೇಕಿದ್ದರೆ ಸಮಾವೇಶ ನಡೆಸಲಿ, ಪಾದಯಾತ್ರೆ ನಡೆಸಲಿ ಅಂತ ಖುದ್ದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಸೌಧದಲ್ಲಿ ಹೇಳಿದ್ದಾರೆ.
ಆದರೆ, ಗೃಹ ಸಚಿವರನ್ನು ಭೇಟಿ ಮಾಡಿರುವ ಕೆ.ಎಸ್. ಈಶ್ವರಪ್ಪ, ಜಗದೀಶ ಶೆಟ್ಟರ್, ಆರ್. ಅಶೋಕ್ ನೇತೃತ್ವದ ಬಿಜೆಪಿ ನಾಯಕರ ತಂಡ ಮಾತ್ರ ಗೃಹ ಸಚಿವರ ಮಾತಿಗೆ ಒಪ್ಪಿಲ್ಲ. ಬದಲಾಗಿ ರ‌್ಯಾಲಿ ಮಾಡಿಯೇ ಸಿದ್ಧ ಎಂದು ಹೇಳಿದ್ದಾರೆ.
ಮತ್ತೊಂದು ಕಡೆ ಬಿಜೆಪಿ ಅಧಿಕೃತವಾಗಿ ಪೊಲೀಸ್ ಅಧಿಕಾರಿಗಳಿಂದ ರ‌್ಯಾಲಿಗೆ ಪರವಾನಿಗೆ ಪಡೆಯಲು ಯತ್ನಿಸಿದೆ. ಆದರೂ ಉಪಯೋಗವಾಗಿಲ್ಲ. ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋಗೆ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ರ‌್ಯಾಲಿಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಕೆ.ಎಫ್.ಡಿ ಹಾಗೂ ಪಿಎಫ್ಐ ನಿಷೇಧಕ್ಕೆ ಒತ್ತಾಯಿಸಿ ಮಂಗಳೂರು ಚಲೋ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಕಾರಣಕ್ಕಾಗಿ ಅನುಮತಿ ನಿರಾಕರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತಿಯಲ್ಲಿ ನಡೆದಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಮತ್ತೊಂದು ಕಡೆ ಬಿಜೆಪಿ ರ‌್ಯಾಲಿ ನಡೆಸುವ ಕರಾವಳಿ ಭಾಗದಲ್ಲಿ ಮೋಡಬಿತ್ತನೆ ಮಾಡುವ ಮೂಲಕ ಮಳೆ ಸುರಿಸುವ ಪ್ಲಾನ್ ನನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎನ್ನಲಾಗಿದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರುತ್ತಿದ್ದು ರ‌್ಯಾಲಿ ಮಾಡಿಯೇ ಸಿದ್ಧ ಎಂದಿದ್ದಾರೆ. ತಾಕತ್ತಿದ್ದರೆ ಕಾಂಗ್ರೆಸ್ ಸರ್ಕಾರ ರ‌್ಯಾಲಿ ತಡೆಯಲಿ ಎಂದು ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.