ಮೊಬೈಲ್ ಅಂಗಡಿಗೆ ಖನ್ನ ಹಾಕಿದ್ದ ಕಳ್ಳರಿಬ್ಬರ ಬಂಧನ
ಅಪಾರ ಮೌಲ್ಯದ ಮೊಬೈಲ್, ಸಾಮಾಗ್ರಿ ವಶಕ್ಕೆ
10 ಲಕ್ಷ ಮೌಲ್ಯದ ಮೊಬೈಲ್‍ಗಳು, ಸಾಮಾಗ್ರಿ ಕಳ್ಳತನ ಮಾಡಿದ್ದ ಆರೋಪಿಗಳಿಬ್ಬರ ಬಂಧನ
ಯಾದಗಿರಿ,ಶಹಾಪುರಃ ಕಳೆದ ಎರಡು ತಿಂಗಳ ಹಿಂದೆ ನಗರದ ತರಕಾರಿ ಮಾರ್ಕೇಟ್ ನಲ್ಲಿರುವ ಮೊಬೈಲ್ ಅಂಗಡಿಯೊಂದರ ಹಿಂಬದಿ ಸೆಟರ್ ಮುರಿದು ಅಂದಾಜು 10,83,500 ರೂ. ಮೌಲ್ಯದ ಮೊಬೈಲ್ ಪೋನ್‍ಗಳು ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಸಿಪಿಐ ಹನುಮರಡ್ಡೆಪ್ಪ ತಿಳಿಸಿದರು.
ನಗರ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣೆ ಮತ್ತು ಉಪ ಅಧೀಕ್ಷಕ ಶಿವನಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಕಾರ್ಯಾಚರಣೆ ತಂಡ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬೀದರ ಮೂಲದವರಾದ ಆಟೋ ಚಾಲಕ ಸೋಮನಾಥ ತಂದೆ ಜಗನ್ನಾಥ ಸಾಗರ (23) ಮತ್ತು ಪೇಂಟರ್ ಮೌನೇಶ್ವರ ತಂದೆ ದಶರಥ (22) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಯಾದಗಿರಿಯ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಈ ಇಬ್ಬರನ್ನು ಗಮನಿಸಿದ ಪೊಲೀಸ್ ಕಾರ್ಯಾಚರಣೆ ತಂಡ ಇವರನ್ನು ಕರೆಯುತ್ತಿದ್ದಂತೆ ಓಡಲಾರಂಭಿಸಿದ ಕಳ್ಳರ ಬೆನ್ನು ಬಿದ್ದು ಈರ್ವರನ್ನು ಬಂಧಿಸಲಾಗಿದೆ.
ನಂತರ ವಿಚಾರಣೆ ನಡೆಸಲಾಗಿ ಶಹಾಪುರ ನಗರದ ತರಕಾರಿ ಮಾರ್ಕೇಟ್ ನಲ್ಲಿರುವ ಮೊಬೈಲ್ ಅಂಗಡಿ ಕಳ್ಳತನ ಮಾಡಿರುವದು ಬೆಳಕಿಗೆ ಬಂದಿದೆ. ಪ್ರಸ್ತುತ ಆರೋಪಿಗಳ ಹತ್ತಿರ 3.07.100 ಮೌಲ್ಯದ ಮೊಬೈಲ್‍ಗಳು ಮತ್ತು ಪವರ್ ಬ್ಯಾಂಕ್, ಬ್ಯಾಟರಿ, ಚಾರ್ಜರ್, ಮೊಬೈಲ್ ವಾಚ್ ಮತ್ತು ಬ್ಲೂಟೂತ್ ಹೆಡ್ ಸೆಟ್‍ಗಳನ್ನು ವಶಕ್ಕೆ ಪಡಿಯಲಾಗಿದೆ ಎಂದು ತಿಳಿಸಿದರು.
ನನ್ನ ನೇತೃತ್ವದ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿಎಸ್‍ಐ ಚಂದ್ರಕಾಂತ, ಎಎಸ್‍ಐ ನಬಿಲಾಲ್, ಹೆಡ್ ಕಾನ್ಸಟೇಬಲ್ ಹೊನ್ನಪ್ಪ, ಬಾಬು ನಾಯ್ಕಲ್, ಸತೀಶಕುಮಾರ ನರಸನಾಯಕ ಮತ್ತು ಪೊಲೀಸ್ ಪೇದೆಗಳಾದ ಗಜೇಂದ್ರ, ಗಣಪತಿ, ಸಿದ್ರಾಮಯ್ಯ ಭಾಗವಹಿಸಿದ್ದರು.