2018ರ ಚುನಾವಣೆ ನನ್ನ ಕೊನೆಯ ಚುನಾವಣೆಃಸಿಎಂ ಸಿದ್ರಾಮಯ್ಯ
ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಪುನಃ ಸ್ಪರ್ಧೆ
ಮೈಸೂರಃ ಚಾಮುಂಡೇಶ್ವರಿ ವಿಧಾನ ಸಭೆ ಕ್ಷೇತ್ರ ನನಗೆ ರಾಜಕೀಯ ಜನ್ಮ ಹಾಗೂ ಪುನರ್ಜನ್ಮ ನೀಡಿದ ಕ್ಷೇತ್ರವಾಗಿದ್ದು, ಕ್ಷೇತ್ರದ ಜನತೆಯನ್ನು ಎಂದಿಗೂ ಮರೆಯುವದಿಲ್ಲ. ನಾನು 2018 ರ ಚುನಾವಣೆಯಲ್ಲಿ ಮತ್ತೇ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಿಎಂ ಸಿದ್ರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಹೂಟಗಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಬಂದಾಗ ಈ ಕ್ಷೇತ್ರದ ಜನರು ನನ್ನ ಕೈಬಿಡಲಿಲ್ಲ. ಅಲ್ಲದೆ ರೇವಣಸಿದ್ದಯ್ಯ ಬಿಜೆಪಿ ಸೇರಿದ ಪರಿಣಾಮ ನಾನು ವರುಣಾ ಕ್ಷೇತ್ರಕ್ಕೆ ಹೋಗಿ ನಿಲ್ಲಬೇಕಾಯಿತು. ಇಲ್ಲವಾದಲ್ಲಿ ಈ ಕ್ಷೇತ್ರ ಬಿಡುತ್ತಿರಲಿಲ್ಲವೆಂದು ವಿಷಾಧ ವ್ಯಕ್ತಪಡಿಸಿದರು.
ನನ್ನ ತಂದೆ-ತಾಯಿ ತೀರಿಕೊಂಡಾಗಲೂ ನಾನು ಅತ್ತಿರಲಿಲ್ಲ. ಆದರೆ ಕ್ಷೇತ್ರ ಬಿಟ್ಟು ಹೋಗುವಾಗ ಗಳಗಳನೆ ಅತ್ತಿದ್ದೆ ಎಂದು ನೆನಪಿಸಿದರು. 2018 ರ ಚುನಾವಣೆ ನನ್ನ ಕೊನೆ ಚುನಾವಣೆಯಾಗಲಿದೆ. ಕೊನೆ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಆಗಬೇಕು ಎಂಬುದು ನನ್ನ ಅಭಿಲಾಷೆ. ಕಳೆದ ಬಾರಿಯೇ ನಾನು ಚುನಾವಣೆಯಿಂದ ದೂರ ಉಳಿಯಬೇಕೆಂದುಕೊಂಡಿದ್ದೆ, ಆದರೆ ಕಾಂಗ್ರೆಸ್ ಹೈಕಮಾಂಡ ಒತ್ತಾಯದ ಮೇರೆಗೆ 2018ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಎಂದಿನಂತೆ ನೀವೆಲ್ಲರೂ ನನಗೆ ಆಶೀರ್ವಧಿಸಿದಂತೆ 2018 ರಲ್ಲೂ ಆಶೀರ್ವಾದ ಮಾಡಬೇಕೆಂದರು.
ಜೆಡಿಎಸ್ ನ ಅವಕಾಶವಾದಿ ಕನಸು ಈಡೇರಲ್ಲ
ಜೆಡಿಎಸ್ ಅವಕಾಶವಾದಿ ರಾಜಕಾರಣಕ್ಕಾಗಿ ಕಾಯುತ್ತಿದೆ. ಕಾಂಗ್ರೆಸ್ ಆಗಲಿ ಬಿಜೆಪಿಗೆಯಾಗಲಿ ಕಡಿಮೆ ಸೀಟು ಬಂದ್ರೆ ಅವರ ಜೊತೆ ಹೋಗಲು ಕಾಯುತ್ತಿದೆ. ಕಡಿಮೆ ಸ್ಥಾನಗಳನ್ನು ಲಭಿಸಿದ್ದಲ್ಲಿ, ಜೆಡಿಎಸ್ ತಮ್ಮ ಬೆಂಬಲ ಸೂಚಿಸಿ ತಮಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದೆ. ಅದು ಹಾಗೋ ಕೆಲಸವಲ್ಲ. ಜೆಡಿಎಸ್ ಆಗಲಿ ಬಿಜೆಪಿಯಾಗಲಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ ಎಂದು ಸಿಎಂ ಸಿದ್ರಾಮಯ್ಯ ಮತ್ತೊಮ್ಮೆ ಗುಡುಗಿದರು.