30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಭವನ ನಿರ್ಮಾಣ-ದರ್ಶನಾಪುರ
ಕಸಾಪ ವತಿಯಿಂದ ನೂತನ ಶಾಸಕರಿಗೆ ಸನ್ಮಾನ
ಯಾದಗಿರಿ, ಶಹಾಪುರಃ ಕನ್ನಡ ನಾಡು ನುಡಿ ರಕ್ಷಣೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ ನಾಡಿನ ಹೆಮ್ಮೆಯ ಸಂಘಟನೆಯಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಕಸಾಪ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವದರೊಂದಿಗೆ ಶಾಸಕರ ಅನುದಾನದಲ್ಲಿ 10 ಲಕ್ಷ ರೂ ಸೇರಿದಂತೆ ಎಂ.ಪಿ. ಅನುದಾನ ಮತ್ತು ಇತರೆ ಮೂಲಗಳಿಂದ ಒಟ್ಟು 30 ಲಕ್ಷ ರೂ. ಕ್ರೋಢಿಕರಿಸಿ ಅದರಲ್ಲಿ ಸುಸಜ್ಜಿತ ಕಸಾಪ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಕಂಪೌಂಡ್, ಅಚ್ಚುಕಟ್ಟು ಮೈದಾನ ಸೇರಿದಂತೆ ಗಿಡಮರಗಳಿಂದ ಕಂಗೊಳಿಸುವ ಭವನ ನಿರ್ಮಾಣ ಮಾಡಬೇಕಿದ್ದು, ಸರ್ವರ ಸಹಕಾರ ಅಗತ್ಯವಿದೆ. ಮತ್ತು ರಾಜ್ಯದಲ್ಲಿ ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಬೇಕಿದೆ. ಆ ನಿಟ್ಟಿನಲ್ಲಿ ಪರಿಷತ್ ಜೊತೆ ಕನ್ನಡ ಪರ ಸಂಘಟನೆಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಅಧಿಕ ಮತಗಳ ಅಂತರದಿಂದ ಚುನಾಯಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಮಾಡುವದಿಲ್ಲ. ಶಹಾಪುರ ನಗರವನ್ನು ಜಿಲ್ಲಾ ಮಟ್ಟದ ನಗರದಂತೆ ಸುಂದರ ಮತ್ತು ಸಕಲ ಸೌಲಭ್ಯ ಹೊಂದಿದ ಮಾದರಿ ನಗರವನ್ನಾಗಿ ಮಾಡುವ ಸದುದ್ದೇಶ ಹೊಂದಿದ್ದೇನೆ. ಆ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಸಲಹೆ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡಿ, ಸಗರ ನಾಡಿನ ಸಾಹಿತ್ಯಾಸಕ್ತರ ಏಳ್ಗೆಗೆ ದರ್ಶನಾಪುರ ಕುಟುಂಬದ ಸೇವೆ ಶ್ಲಾಘನೀಯವಾಗಿದ್ದು, ಶಹಪುರ ನಗರದಲ್ಲಿ ಕಸಾಪ ಭವ್ಯ ಕಟ್ಟಡ ನಿರ್ಮಾಣ ಸಾಹಿತ್ಯ ಆಸಕ್ತರ ಆಶಯವಾಗಿದೆ. ಆಶಯ ಈಡೇರಿಸಲು ನೂತನ ಶಾಸಕರು ಭರವಸೆ ನೀಡಿದ್ದು, ಸಂತಸ ತಂದಿದೆ.
ಮೊದಲಿಂದಲೂ ಶಾಸಕರು ಮಾತೃ ಭಾಷೆ ಮೇಲೆ ಅಪಾರ ಪ್ರೀತಿ ಹೊಂದಿದ್ದು, ಪರಿಷತ್ ಕಾರ್ಯವೈಕರಿ ಬಗ್ಗೆ ಅಪಾರ ಕಾಳಜಿ ಇದೆ. ಶಾಸಕರು ನಿರಂತರವಾಗಿ ಕಸಾಪ ಕಾರ್ಯಚಟುವಟಿಕೆಗಳಿಗೆ ತನು ಮನ ಧನದಿಂದ ಸಹಕರಿಸಿದ್ದು, ಕಸಾಪ ಬೆಳವಣಿಗೆಗೆ ಪ್ರೋತ್ಸಾಹಿಸಿದ್ದಾರೆ ಎಂದರು.
ಸಗರ ವಲಯ ಕಸಾಪ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ಪ್ರಾಸ್ತವಿಕವಾಗಿ ಮಾತನಡಿದರು. ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಸಾಹಿತಿ ಸಿದ್ರಾಮ ಹೊನ್ಕಲ್, ಚಂದ್ರಕಾಂತ ಕರದಳ್ಳಿ, ಮಾತನಾಡಿದರು.
ಸಾಹಿತಿಗಳಾದ ದೊಡ್ಡಬಸ್ಸಪ್ಪ ಬಳ್ಳೂರಿಗಿ, ಕಸಾಪ ಮಾಜಿ ಅಧ್ಯಕ್ಷ ಗುರುಬಸ್ಸಯ್ಯ ಗದ್ದುಗೆ, ಕಸಾಪ ಖಜಾಂಚಿ ಬಸವರಾಜ ಹೀರೆಮಠ, ಶಿರವಾಳ ವಲಯದ ಅಧ್ಯಕ್ಷ ಮಲ್ಲಣ್ಣ ಶಿರವಾಳ, ದೋರನಳ್ಳಿ ವಲಯ ಅಧ್ಯಕ್ಷ ಮಹಾಂತಪ್ಪ ಜಾಗಟೆ, ಗೋಗಿ ವಲಯ ಅಧ್ಯಕ್ಷ ಮಲ್ಲಣಗೌಡ ಪೋಲಿಸ್ ಪಾಟೀಲ್ ಉಪಸ್ಥಿತರಿದ್ದರು.
ಸಾಹಿತಿಗಳಾದ ಅಬ್ದುಲ್ ಕರೀಂ ಕನ್ಯಾಕೋಳೂರ, ಶಿವಣ್ಣ ಇಜೇರಿ, ಡಾ.ಡಿ.ಜಿ.ಹಡಪದ, ಸಂಶೋಧಕ ಡಾ.ಎಂ.ಎಸ್.ಶಿರವಾಳ, ಮುಖಂಡರಾದ ಬಸನಗೌಡ ಸುಬೇದಾರ, ವಕೀಲರ ಸಂಘದ ಅಧ್ಯಕ್ಷ ಸಾಲೊಮನ್ ಆಲ್ಪ್ರೆಡ್, ಬಸವರಾಜಪ್ಪಗೌಡ ತಂಗಡಗಿ, ಹನುಮೇಗೌಡ ಮರಕಲ್, ಸಣ್ಣ ನಿಂಗಣ್ಣ ನಾಯ್ಕೋಡಿ, ಅಮ್ಮ ಕ್ಯಾಂಟೀನ ಮಾಲೀಕ ಗುರು ಮಣಿಕಂಠ ಸೇರಿದಂತೆ ಇತರರು ಭಾಗವಹಿಸಿದ್ದರು.
ಕವಿತಾ ಬಡಿಗೇರ ಪ್ರಾರ್ಥಿಸಿದರು. ಬಸವರಜ ಸಿನ್ನೂರ ನಿರೂಪಿಸಿದರು. ಉಪನ್ಯಾಸಕಿ ಹಣಮಂತಿ ಗುತ್ತೇದಾರ ಸ್ವಾಗತಿಸಿದರು. ಸಾಯಬಣ್ಣ ವಂದಿಸಿದರು.