ತೋಟದ ಮನೆಗೆ ನುಗ್ಗಿದ ಏಳುವರೆ ಅಡಿಯ ಕೆರೆ ಹಾವು
ಕೆರೆ ಹಾವು ಹಿಡಿದು ಅರಣ್ಯಕ್ಕೆ ಬಿಟ್ಟ ಪೋಲಂಪಲ್ಲಿ
ಯಾದಗಿರಿ, ಶಹಾಪುರಃ ನಗರದ ಹೊರವಲಯದಲ್ಲಿರುವ ಹಣಮಂತ್ರಾಯ ನರಸನಾಯಕ ಎಂಬುವರ ತೋಟದ ಮನೆಗೆ ನುಗ್ಗಿದ ಕೆರೆ ಹಾವು ಮನೆಯಲ್ಲಿರುವ ಜನರನ್ನು ತಲ್ಲಣಗೊಳಿಸಿದೆ. ಹಾವು ಕಂಡು ಭಯಗೊಂಡ ಮನೆಯ ಜನರು ಹೊರಗಡೆ ಓಡಿ ಬಂದಿದ್ದಾರೆ.
ಹಾವು ಸಾಕಷ್ಟು ದೊಡ್ಡದಿದ್ದು ಅದನ್ನು ಕಂಡ ಜನರು ಭಯಭೀತಗೊಂಡಿದ್ದಾರೆ. ನಂತರ ಮನೆಯ ಯಜಮಾನ ತಕ್ಷಣ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಲ್ಲಯ್ಯ ಪೋಲಂಪಲ್ಲಿ ಕಾರ್ಯಪ್ರವೃತ್ತರಾಗಿ ಕೆಲವೇ ನಿಮಿಗಳಲ್ಲಿ ಹಾವನ್ನು ಹಿಡಿದಿದ್ದಾರೆ.
ಹಾವು ಹಿಡಿಯುವದರಲ್ಲಿ ನಿಷ್ಣಾತರಾಗಿದ್ದ ಇವರು, ಪರಿಣಿತರಿಂದ ತರಬೇತಿ ಸಹ ಪಡೆದಿದ್ದಾರೆ. ಈ ದೊಡ್ಡ ಹಾವನ್ನು ಅಷ್ಟೆ ಸುಲಭದಲ್ಲಿ ಚಾಣಕ್ಷತನದಿಂದ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಸುಮಾರು ಏಳುವರೆ ಅಡಿಯಾಗಿದ್ದು, ಇದಕ್ಕೆ ಕೆರೆ ಹಾವು ಎನ್ನುತ್ತಾರೆ ಎಂದು ಪೋಲಂಪಲ್ಲಿ ಅವರು ತಿಳಿಸಿದ್ದಾರೆ.
ಹಾವನ್ನು ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಮನೆಯ ಜನರು ಹಾವು ಹಿಡಿದ ಪೋಲಂಪಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.