ಶಹಾಪುರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ದಲಿತ ಸೇನೆ ಆಕ್ರೋಶ
ನೆಲದ ಮೇಲೆ ಮಲಗಿದ್ದ ಬಾಣಂತಿಯರು, ಸಮರ್ಪಕ ವ್ಯವಸ್ಥೆ ಮಾಡದ ಆಸ್ಪತ್ರೆ
ಯಾದಗಿರಿ, ಶಹಾಪುರಃ ಸಂತಾನ ಹರಣ ಚಿಕಿತ್ಸೆಗೆಂದು ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬಂದ ಬಾಣಂತಿಯರಿಗೆ ಚಿಕಿತ್ಸೆಯ ನಂತರ ನೆಲದ ಮೇಲೆ ಮಲಗಿಸಿರುವುದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಾಲೂಕು ದಲಿತ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಬಾಣಂತಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡಿ ಸುವ್ಯವಸ್ಥೆಯ ಬೆಡ್ ಹಾಸಿಗೆ ಮೇಲೆ ಮಲಗಿಸಬೇಕಿತ್ತು. ಆದರೆ ಇಲ್ಲಿನ ವೈದ್ಯರ ಬೇಜವಬ್ದಾರಿಯಿಂದ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ್ದಾರೆ ಎಂದು ಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಬಗ್ಗೆ ಕಾಳಜಿ ತೋರುವ ಬದಲು ಮನಬಂದಂತೆ ಆಸ್ಪತ್ರೆಯ ಒಂದು ಕೊಠಡಿಯ ನೆಲದ ಮೇಲೆ ಮಲಗಿಸಲಾಗಿದೆ. ಇದು ಆಸ್ಪತ್ರೆಯ ಅವ್ಯವಸ್ಥೆ ತೋರುತ್ತಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಯಾವುದೇ ಸಮರ್ಪಕವಾಗಿ ಮೂಲ ಸೌಲಭ್ಯವಿಲ್ಲ. ಸ್ವಚ್ಛತೆಯೂ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರ್ಕಾರದಿಂದ ಸಾಕಷ್ಟು ಅನುದಾನವಿದ್ದರೂ ಸದ್ಭಳಿಕೆ ಮಾಡದ ಇಲ್ಲಿನ ಆರೋಗ್ಯ ಅಧಿಕಾರಿಗಳು ಅನುದಾನವನ್ನು ಬೇಕಾಬಿಟ್ಟಿ ಖರ್ಚು ತೋರಿಸಿ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ ಎಂದು ಸೇನೆ ಆರೋಪಿಸಿದೆ. ಆಸ್ಪತ್ರೆಯಲ್ಲಿ ಬಾಣಂತಿಯರನ್ನು ನೆಲದ ಮೇಲೆ ಮಲಗಿಸುವ ಮೂಲಕ ಆರೋಗ್ಯ ಅಧಿಕಾರಿಗಳು ಬೇಜವಬ್ದಾರಿತನ ತೋರಿದ್ದಾರೆ. ಈ ಕುರಿತು ಫೋನಾಯಿಸಿ ಕೇಳಿದರೆ, ನನಗೇನು ಗೊತ್ತಿಲ್ಲ, ನಾನು ಇವತ್ತು ಆಸ್ಪತ್ರೆಯಲ್ಲಿ ಇಲ್ಲ. ಕರ್ತವ್ಯದ ಮೇಲೆ ಬೇರಡೆ ಬಂದಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.
ದಿನಕ್ಕೆ ಕೇವಲ 30 ಸಂತಾನ ಹರಣ ಚಿಕಿತ್ಸೆ ಮಾಡಬೇಕಿತ್ತು. ಇಲ್ಲಿ ನೋಡಿದರೆ 60 ಕ್ಕೂ ಹೆಚ್ಚು ಜನರಿಗೆ ಒಂದೇ ದಿನ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಕುರಿತು ಕೇಳಿದರೆ ಸಮರ್ಪಕ ಉತ್ತರ ನೀಡದ ಇಲ್ಲಿನ ಅಧಿಕಾರಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಕೂಡಲೇ ಇಲ್ಲಿನ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೇನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಗ್ರಾಮೀಣದಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ಬರುವ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮಹಿಳೆಯರಿಗೆ ಅನಾಹುತ ಸಂಭವಿಸಿದ್ದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೇ ಜವಬ್ದಾರರಾಗಲಿದ್ದಾರೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಅಶೋಕ ಹೊಸಮನಿ ತಾಲೂಕು ಅಧ್ಯಕ್ಷ ಹೊನ್ನರಾಜ ನಾಟೇಕಾರ ಎಚ್ಚರಿಸಿದ್ದಾರೆ. ಅಲ್ಲದೆ ಗುರುವಾರ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕ ಆಸ್ಪತ್ರೆ ಮುಂದೆ ಸೇನೆವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.




