ಕೈಗಾರಿಕ ಘಟಕಗಳ ಸ್ಥಳಾಂತರಕ್ಕೆ ಕರಸೇನೆ ಆಗ್ರಹ
ಬಡಾವಣೆ ಆವರಿಸಿದ ಕಲುಷಿತ ವಾತಾವರಣ, ರೋಗರುಜಿನ ಭೀತಿಯಲ್ಲಿ ನಿವಾಸಿಗರು
ಯಾದಗಿರಿ, ಶಹಾಪುರಃ ನಗರದ ವಾರ್ಡ್ ನಂ-20 ರಲ್ಲಿ ಹಲವು ವರ್ಷಗಳಿಂದ ತಲೆ ಎತ್ತಿರುವ ವಿವಿಧ ಕಾರ್ಖಾನೆ ಘಟಕಗಳನ್ನು ಬೇರಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಇಲ್ಲಿನ ಕರ್ನಾಟಕ ರಕ್ಷಣಾ ಸೇನೆ ಪ್ರತಿಭಟನಾ ಮೆರವಣಿಗೆ ನಡೆಸಿ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಮೌನೇಶ ಸುರಪುರಕರ್, ನಗರದ ವಾರ್ಡ್ ನಂ-20 ರಲ್ಲಿ ಬರುವ ಹಳಿಸಗರ ಭಾಗದಲ್ಲಿ ಹಾಲೋಬ್ಲಾಕ್ ಮತ್ತು ಇಟ್ಟಂಗಿ ತಯಾರಿಕ ಘಟಕಗಳು ತಲೆ ಎತ್ತಿದ್ದು, ಬಡಾವಣೆ ನಾಗರಿಕರಿಗೆ ಇದರಿಂದ ಕಲುಷಿತ ವಾತಾವರಣ ಉಂಟಾಗಿ ತೊಂದರೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ವರ್ಷದಿಂದ ಕೈಗಾರಿಕಾ ಘಟಕಗಳ ತೆರವಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಇಲ್ಲಿವರೆಗೂ ಯಾರೊಬ್ಬ ಅಧಿಕಾರಿಯೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ಜಿಲ್ಲಾ ಉಸ್ತುವಾರಿಯಾಗಿದ್ದ ಬಾಬುರಾವ್ ಚಿಂಚನಸೂರ ಸೇರಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರಿಗೂ ಈ ಕುರಿತು ಮನವಿ ಸಲ್ಲಿಸಲಾಗಿದೆ. ಆದಾಗ್ಯು ಯಾವುದೇ ಕ್ರಮಕೈಗೊಂಡಿರುವದಿಲ್ಲ.
ಕೈಗಾರಿಕಾ ಘಟಕಗಳು ಬಡಾವಣೆಯಿಂದ ದೂರದಲ್ಲಿರಬೇಕು. ಜನನಿಬಿಡ ಸ್ಥಳದಲಿ ಕೈಗಾರಿಕಾ ಘಟಕಗಳು ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಘಟಕಗಳ ತೆರವಿಗೆ ಕ್ರಮ ಕೈಗೊಳ್ಳಬೇಕು.
ಇದರಿಂದ ಇಲ್ಲಿನ ನಿವಾಸಿಗಲಿಗೆ ತೊಂದರೆಯಾಗುತ್ತಿದೆ. ಬಡಾವಣೆ ವಾತಾವರಣ ಸಂಪೂರ್ಣ ಕಲುಷಿತಗೊಂಡಿದೆ. ಮಕ್ಕಳು ಸೇರಿದಂತೆ ವೃದ್ಧಾಪಿ ಜನರು ಇದರಿಂದ ವಿವಿಧ ಖಾಯಿಲೆಗೆ ತುತ್ತಾಗಿದ್ದಾರೆ.
ನಾಗರಿಕರು ರೋಗ ರುಜಿನ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ನ್ಯಾಯ ದೊರಕದಿದ್ದರೆ ಬಡಾವಣೆ ನಾಗರಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದ ವಾಲ್ಮೀಕಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು. ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ ಶ್ರೀಕಾಂತಾಚಾರ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಣಮಂತ ಸಗರ, ನಾಗು ಹೊಸಹಳ್ಳಿ, ತಿರುಪತಿ, ಸಚಿನ್, ಮಹಾದೇವ, ಮುತ್ತಯ್ಯ, ಮಶಾಕ್, ನಿಂಗಪ್ಪ ದೋರನಹಳ್ಳಿ, ಮೌನೇಶ ಕನ್ಯಾಕೋಳೂರ, ಹುಸೇನಪ್ಪ, ವಿರೇಶ, ಭೀಮಣ್ಣ, ಹುಲಗಪ್ಪ, ಪುಲ್ಲಯ್ಯ, ಲಕ್ಷ್ಮಣ, ನಾಗಪ್ಪ, ನರಸಪ್ಪ, ಗೋವಿಂದ, ದುರ್ಗಪ್ಪ ಇತರರು ಭಾಗವಹಿಸಿದ್ದರು.