ವಸತಿ ನಿಲಯಗಳಿಗೆ ಸೌಲಭ್ಯ ಕಲ್ಪಿಸಲು ಎಬಿವಿಪಿ ಆಗ್ರಹ
ವಸತಿ ನಿಲಯಗಳಿಗೆ ಸೌಕರ್ಯ ಕಲ್ಪಿಸಿ
ಯಾದಗಿರಿ, ಶಹಾಪುರಃ ರಾಜ್ಯದಲ್ಲಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ಎಬಿವಿಪಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಸಂಗಮೇಶ ಜಿಡಗೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ವಸತಿ ನಿಲಯಗಳು ಮೂಲ ಸೌಕರ್ಯಗಳಿಲ್ಲದೆ ನರಳುತ್ತಿವೆ. ಕುಡಿಯುವ ನೀರು, ಹೊದಿಕೆ, ಬಸ್ ಸೌಲಭ್ಯ ಸೇರಿದಂತೆ ನಿಯಮನುಸಾರ ನೀಡಬೇಕಾದ ಊಟದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಕಂಗಲಾಗಿದ್ದಾರೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ವಿದ್ಯಾರ್ಥಿಗಳಿಗೆ ಸರ್ಕಾರ ನಿಯಮನುಸಾರ ಒದಗಿಸಬೇಕಾದ ಸೌಲಭ್ಯ ಕಲ್ಪಿಸದೆ ವಂಚನೆ ಮಾಡಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ಅಭ್ಯಾಸ ಕುಂಠಿತಗೊಂಡಿದೆ. ಶಾಲೆಯಿಂದ ವಸತಿ ನಿಲಯದವರೆಗೆ ಸಮರ್ಪಕ ಬಸ್ ಸಂಚಾರ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಬಡ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತಿದೆ.
ಸರ್ಕಾರ ಕೂಡಲೇ ರಾಜ್ಯದಾದ್ಯಂತ ವಸತಿ ನಿಲಯಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರ ನೀಡಬೇಕು. ಇಲ್ಲವಾದಲ್ಲಿ ಎಬಿವಿಪಿಯಿಂದ ರಾಜ್ಯದಾದ್ಯಂತ ಹೋರಾಟ ರೂಪಿಸುವದಾಗಿ ಎಚ್ಚರಿಕೆ ನೀಡಿದರು.
ಎಬಿವಿಪಿ ಮುಖಂಡ ಅರವಿಂದ ಉಪ್ಪಿನ್, ಶಿವಕುಮಾರ ಕಟ್ಟಿಮನಿ, ನಾಗರಾಜ ಮಕಾಶಿ, ಸಿದ್ದು ಕಟ್ಟಿಮನಿ, ರವಿ, ನೀತಿನ, ಅಭಿಷೇಕ, ಬಸ್ಸು ಗುತ್ತೇದಾರ, ಅವಿನಾಶ ಗುತ್ತೇದಾರ, ಭೀಮಾಶಂಕರ ಕಟ್ಟಿಮನಿ, ಸಿದ್ದು ಆನೇಗುಂದಿ, ಸಾಗರ ಹೋತಪೇಟ, ಮಲ್ಲು ಜಾಕಾ, ಮಲ್ಲಮ್ಮ ಸೇರಿದಂತೆ ವಸತಿ ನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.