ಹುತಾತ್ಮ ವೀರ ಯೋಧ-ಕಣ್ಣೀರಿಟ್ಟ ಮಂಡ್ಯ
ಕುಸಿದ ಆಧಾರಸ್ಥಂಭ-ಮನೆಯಲ್ಲಿ ನೀರವ ಮೌನ
ಮಂಡ್ಯ: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಜಿಲ್ಲೆಯ ವೀರಯೋಧ ಗುರು ಹೆಚ್. ಹುತಾತ್ಮನಾಗಿದ್ದಾರೆ. ಕಳೆದ 9 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈತ ಒಂದು ವಾರದ ಹಿಂದೆಯಷ್ಟೆ ರಜೆಯನ್ನು ಮುಗಿಸಿ ಸಂತೋಷದಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದ ಎನ್ನಲಾಗಿದೆ.
ಅಷ್ಟರಲ್ಲಿ ದುಷ್ಟಶಕ್ತಿ ಆತನನ್ನು ಕರೆದೊಯ್ದಿದೆ. ಹೆಂಡತಿಗೆ ಪ್ರೀತಿಯ ಮಾತುಗಳನ್ನಾಡಿ ಕಾಶ್ಮೀರಕ್ಕೆ ಹೋಗಿದ್ದ ಯೋಧ ಇನ್ನು ನೆನಪು ಮಾತ್ರ.
ಯಾಕೆಂದರೆ ಭಯೋತ್ಪಾದಕರ ಹೇಯ ಕೃತ್ಯಕ್ಕೆ ಬ್ಯಾಚ್ ನಂಬರ್ 82ರ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಜಿಲ್ಲೆಯ ಗುಡಿಗೆರೆ ಗ್ರಾಮದ ವೀರಯೋಧ ಗುರು ಹುತಾತ್ಮರಾಗಿದ್ದಾರೆ.
ಇದರಿಂದ ಯೋಧನ ಹುಟ್ಟೂರು ಗುಡಿಗೆರೆ ಕಾಲೋನಿಯಲ್ಲಿ ನೀರವ ಮೌನ ಆವರಿಸಿದೆ. ಇವರು 2011ರಲ್ಲಿ ಅರೆ ಸೇನಾಪಡೆಗೆ ಸೇರ್ಪಡೆಯಾಗಿದ್ದರು.
ಈ ಗ್ರಾಮದಲ್ಲಿ ಶ್ರಮಿಕ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಬಡತನದಿಂದ ಬಂದಿದ್ದ ಗುರು, ಸಹೋದರರಿಗೆ ಉತ್ತಮ ಭವಿಷ್ಯ ರೂಪಿಸಲು ಸಿಆರ್‌ಪಿಎಫ್ ಸೇರಿದ್ದರು.
ಹೊನ್ನಯ್ಯ, ಚಿಕ್ಕೋಳಮ್ಮ ಎಂಬವರ ಮೊದಲ ಪುತ್ರನಾದ ಗುರು ಅವರಿಗೆ ಮಧು ಹಾಗೂ ಆನಂದ್ ಎಂಬ ಇಬ್ಬರು ಸಹೋದರರಿದ್ದಾರೆ. ಒಂಭತ್ತು ತಿಂಗಳ ಹಿಂದೆ ಕನಕಪುರ ತಾಲೂಕಿನ ಸಾಸಲಪುರ ಗ್ರಾಮದ ಕಲಾವತ ಎಂಬ ಯುವತಿಯನ್ನು ವಿವಾಹವಾಗಿದ್ದರು.