ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಿ – ಮುಕುಂದಾ
ಯಾದಗಿರಿ, ಶಹಾಪುರಃ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಶಿಕ್ಷಕರು, ಪಾಲಕರು, ಪೋಷಕರು ಜೊತೆಯಾಗಿ ಶ್ರಮಿಸಬೇಕು. ಶಾಲೆಯಲ್ಲಿ ಮತ್ತು ಮನೆಯಲ್ಲಿ ಮಕ್ಕಳಲ್ಲಿನ ವಿವಿಧ ದೋಷಗಳು ಮಾತ್ರ ಗುರುತಿಸಬಾರದು. ಯಾವ ಮಕ್ಕಳು ದಡ್ಡಾರಾಗಿರುವುದಿಲ್ಲ. ಸಹಜ ಕಲಿಕೆಯ ಪ್ರಕ್ರಿಯೆ ಮೂಲಕ ಉತ್ತಮ ಕಲಿಕಾ ವಾತವರಣ ನಿರ್ಮಾಣ ಮಾಡಬೇಕು ಎಂದು ಶಿಕ್ಷಣ ತಜ್ಞ ಮುಕುಂದ ಮೈಗುರ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಬಚಪನ್ ಶಾಲೆಯಲ್ಲಿ ನಗರ ಅಭಿವೃದ್ದಿ ಶಿಕ್ಷಣ ಸಂಸ್ಥೆಯ ಲಿಟ್ಲ್ ಪ್ಲಾವರ್ ಪಬ್ಲಿಕ್ ಸ್ಕೂಲ್ ಮತ್ತು ಬಚಪನ್ ಪ್ಲೇ ಸ್ಕೂಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿನ ಕಲಿಕಾ ಸಮಸ್ಯೆಗಳು ಹಾಗೂ ಸಹಜ ಕಲಿಕೆಯ ಚಟುವಟಿಕೆಗಳು ತಾಯಿಯ ಗರ್ಭದಿಂದ ಹಾಗೂ ಕೌಟುಂಬಿಕ ಪರಿಸರದಿಂದ ಹುಟ್ಟಿಕೊಳ್ಳುತ್ತದೆ ಎಂಬುದು ಮರೆಯಬಾರದು. ಹೆಚ್ಚಿನ ಅಂಕಗಳು ಪಡೆಯಬೇಕೆಂಬ ಏಕೈಕ ಆಸೆಯಿಂದ ಮಕ್ಕಳ ಮೇಲೆ ಪಾಲಕರಾಗಲಿ ಶಿಕ್ಷಕರಾಗಲಿ ಒತ್ತಡ ಹಾಕಬಾರದು.
ಮಕ್ಕಳನ್ನು ಇನ್ನೊಬರ ಮಕ್ಕಳೊಂದಿಗೆ ಎಂದಿಗೂ ಹೋಲಿಸಬೇಡಿ. ಈ ಹಿನ್ನೆಲೆಯಲ್ಲಿ ಹೀಯಾಳಿಸಬೇಡಿ ಅಂಕಗಳೇ ಮಕ್ಕಳ ಭವಿಷ್ಯದ ಮಾನದಂಡಗಳಲ್ಲ. ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿ, ಅಭಿರುಚಿ, ಕೌಶಲ್ಯಗಳನ್ನಾದರಿಸಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು.
ಮಕ್ಕಳು ದೇವರು ಕೊಟ್ಟ ಪ್ರಸಾದ. ಅಂತಹ ದೈವಿ ಸ್ವರೂಪಿಯ ಮಕ್ಕಳನ್ನು ದೇಶದ ಸಂಪನ್ಮೂಲಗಳನ್ನಾಗಿ ಮಾಡುವ ಜವಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ. ಕುಂಬಾರಗೇರಿ ಹೀರೇಮಠದ ಸುಗೂರೇಶ್ವರ ಶಿವಚಾರ್ಯರು ಮಾತನಾಡಿ, ಉತ್ತಮ ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ಆ ನಿಟ್ಟಿನಲ್ಲಿ ಸಂಸ್ಥೆಗಳು ಮೂಲ ಸೌಲಭ್ಯ ಒದಗಿಸುವ ಜೊತೆಗೆ ಹೆಚ್ಚಿನ ಕ್ರಮಕೈಗೊಳ್ಳಬೇಕು ಎಂದರು.
ಚರಬಸವೇಶ್ವರ ಗದ್ದುಗೆಯ ವೇದ ಮೂರ್ತಿ ಬಸವಯ್ಯ ಶರಣರು, ಮಕ್ಕಳ ತಜ್ಞ ಡಾ. ಸುದತ್ತ ದರ್ಶನಾಪೂರ, ಕೃಷ್ಣಾ ಪಟ್ಟಣ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ, ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಸದಾಶಿವಯ್ಯ ಆದೋನಿ, ಕಾರ್ಯದರ್ಶಿ ಶಿವಕುಮಾರ ಆದೋನಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೀರಯೋಧ ದುರ್ಗಪ್ಪ ಸಗರ, ಶಿಕ್ಷಕಿ ಚಂದ್ರಕಲಾ ಗೂಗಲ್, ಯುವ ಸಾಹಿತಿ ಗುತ್ತಪ್ಪ ಬಡಿಗೇರ, ಮಾದರಿ ರೈತ ಶರಣಗೌಡ ಪಾಟೀಲ ಚಂದಾಪೂರ, ಸಂಗೀತ ಕಲಾವಿದ ಬೂದಯ್ಯ ಹೀರೆಮಠ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.