ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ
ಹೊಲದಲ್ಲಿ ತೊಗರಿ ಕಟಿಗೆಯಿಂದ ಸುಟ್ಟ ಶವ ಪತ್ತೆ
ಕೊಲೆಗೈದು ಹೊಲಕ್ಕೆ ತಂದು ಶವ ಸುಟ್ಟಿರುವ ಶಂಕೆ
ಯಾದಗಿರಿಃ ತೊಗರಿ ಕಟಿಗೆಗಳಲ್ಲಿ ಓರ್ವ ವ್ಯಕ್ತಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಶವ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ.
ಸಗರ ಗ್ರಾಮ ಸೀಮಾಂತರದಲ್ಲಿ ಬರುವ ಶಾರದಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ಬಸವಣ್ಣನ ಕಟ್ಟೆ ಸಮೀಪದ ಖಾಸಗಿಯವರ ಜಮೀನೊಂದರಲ್ಲಿ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿಯನ್ನು ಕೊಲೆಗೈದು ಶುಕ್ರವಾರ ರಾತ್ರಿ ತೊಗರಿ ಕಟಿಗೆಗಳನ್ನು ಹಾಕಿ ಆತನನ್ನು ಸುಟ್ಟು ಹಾಕಿರುವ ಶಂಕೆಯನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಶವ ಸಂಪೂರ್ಣ ಕರಕಲಾದ ಗುರುತು ಸಿಗದ ಸ್ಥಿತಿಯಲ್ಲಿ ದೊರೆತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಶಹಾಪುರ ಠಾಣೆಯ ಸಿಪಿಐ ನಾಗರಾಜ ಕೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ತನಿಖೆಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಭೇಟಿ ಸ್ಥಳ ಪರಿಶೀಲನೆ
ಘಟನಾ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಟ್ಟು ಕರಕಲಾದ ಶವ ವೀಕ್ಷಿಸಿದ ಅವರು, ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗವುದು. ನಂತರ ಈ ಕುರಿತು ವಿವರ ನೀಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಘಟನಾ ಸ್ಥಳದಲ್ಲಿ ಬಿದ್ದ ಬೈಕ್ ಚಾವಿ, ಕೈ ಗಡಿಯಾರ ಸೇರಿದಂತೆ ಇತರೆ ವಸ್ತಗಳನ್ನು ವಶಕ್ಕೆ ಪಡೆದುಕೊಂಡು, ಮುಂದಿನ ಕ್ರಮಕ್ಕೆ ಸೂಚಿಸಿದರು.