ಪ್ರಮುಖ ಸುದ್ದಿ

ಶಿವನ ಸಾಕ್ಷಾತ್ಕಾರ ಪಡೆದುಕೊಂಡ ಸಾಧ್ವಿ ಮಲ್ಲಮ್ಮ-ರಜಪೂತ

ಹೇಮರಡ್ಡಿ ಮಲ್ಲಮ್ಮ ಜೀವನ ಇಂದಿನ ಸಮಾಜಕ್ಕೆ ದಾರಿದೀಪ

ಯಾದಗಿರಿಃ ಹೇಮರಡ್ಡಿ ಮಲ್ಲಮ್ಮನವರು ಕುಟುಂಬದಲ್ಲಿ ಎಷ್ಟೇ ಕಷ್ಟ, ಅಪಾದನೆಗಳು ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೆ ಲೌಖಿಕ ಪ್ರಪಂಚವನ್ನು ತ್ಯಾಗ ಮಾಡಲಿಲ್ಲ. ಸಂಸಾರದಲ್ಲಿದ್ದುಕೊಂಡೇ ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧಿಸಿ, ಧ್ಯಾನಿಸಿ ಅವರನ್ನು ಸಾಕ್ಷಾತ್ಕಾರ ಮಾಡಿಕೊಂಡು ಸದ್ಗತಿ ಹೊಂದಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ ಹಾಗೂ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಮಲ್ಲಮ್ಮ ತನ್ನ ಜೀವನವಿಡೀ ಕಷ್ಟ ಅನುಭವಿಸಿದರೂ ಸಹ ತನಗೆ ನೋವುಂಟು ಮಾಡಿದವರ ಹಿತವನ್ನು ಬಯಸಿದರು. ದಾನ ಕೇಳಲು ಮನೆಗೆ ಬರುವವರನ್ನು ಬರಿಗೈಯಿಂದ ಕಳುಯಿಸುತ್ತಿರಲಿಲ್ಲ. ಅವರ ದಾನ ಪ್ರವೃತ್ತಿಯೂ ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ. ಹೇಮರಡ್ಡಿ ಮಲ್ಲಮ್ಮನವರ ಭಕ್ತಿಯು ಅಚಲವಾಗಿತ್ತು. ಹೀಗಾಗಿಯೇ ಅವರು ಇಷ್ಟ ದೇವರನ್ನು ಒಲಿಸಿಕೊಂಡಿದ್ದು ಎಂದು ಅವರು ಹೇಳಿದರು.

ಭಕ್ತಿಯ ಪರಕಾಷ್ಠೆ ಮೆರೆದ ಮಲ್ಲಮ್ಮನನ್ನು ಪರೀಕ್ಷೆ ಮಾಡಲು ಒಮ್ಮೆ ಶಿವನು ಜಂಗಮ ರೂಪದಲ್ಲಿ ಬರುತ್ತಾನೆ. ಹೇಮರಡ್ಡಿ ಮಲ್ಲಮ್ಮನವರು ಮನೆಯಲ್ಲಿದ್ದ ರೊಟ್ಟಿ, ಪುಡಿಕಾರ ನೀಡುತ್ತಾರೆ. ಕಷ್ಟದಲ್ಲಿದ್ದರೂ ದಾನ ಮಾಡುವುದನ್ನು ಬಿಡದ ಮಲ್ಲಮ್ಮನವರನ್ನು ಕುರಿತು ಇದು ಅಮೃತ ಎಂದು ಸ್ವೀಕಾರ ಮಾಡಿ ಹರಸುತ್ತಾನೆ ಎಂದು ಅವರು ವಿವರಿಸಿದರು.

ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ ಅವರು ಮಾತನಾಡಿ, ಹೇಮರಡ್ಡಿ ಮಲ್ಲಮ್ಮನವರಿಗೆ ಒಂದು ದಿನ ಪರಮೇಶ್ವರ ಪ್ರತ್ಯಕ್ಷನಾಗಿ ಯಾವ ವರ ಬೇಕು ಕೇಳು ಎಂದಾಗ, ಹೇಮರೆಡ್ಡಿ ಮಲ್ಲಮ್ಮ ತಾನು ಅನುಭವಿಸಿದ ಕಷ್ಟ ತನ್ನ ರಡ್ಡಿ ಸಮಾಜಕ್ಕೆ ಬರಬಾರದು.

ಸಕಲ ರಡ್ಡಿ ಸಮಾಜಕ್ಕೆ ಸುಖಃ, ಸಮೃದ್ಧಿ ನೀಡು ಎಂದು ಬೇಡಿಕೊಳ್ಳುತ್ತಾಳೆ. ಪರಮೇಶ್ವರ ಕೂಡ ಶಿವಶರಣೆಯ ಭಕ್ತಿಗೆ ಮೆಚ್ಚಿ ವರ ನೀಡುತ್ತಾನೆ. ಭಕ್ತಿಯಿಂದಲೇ ಶಿವನನ್ನು ಮೆಚ್ಚಿಸಿದ ಹೇಮರಡ್ಡಿ ಮಲ್ಲಮ್ಮನವರ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಹೇಳಿದರು.

ಹೇಮರಡ್ಡಿ ಮಲ್ಲಮ್ಮನವರ ಸರಳ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಪ್ರಸ್ತುತ ದಿನಗಳಲ್ಲಿ ಹೇಮರಡ್ಡಿ ಮಲ್ಲಮ್ಮನವರ ತತ್ವಸಿದ್ಧಾಂತ, ಆದರ್ಶಗಳನ್ನು ಪ್ರಚುರಪಡಿಸಿ, ಅನುಸರಿಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು.

ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಅನಸೂಯಾ ಪಾಟೀಲ್ ಅವರು ಉಪನ್ಯಾಸ ನೀಡಿ, ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಪುರದ ಅರಸೊತ್ತಿಗೆಯ ನಾಗರೆಡ್ಡಿ-ಗೌರಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಮಲ್ಲಮ್ಮ ಬಾಲ್ಯದಲ್ಲಿಯೇ ಸದಾಕಾಲ ಶ್ರೀಶೈಲ ಮಲ್ಲಿಕಾರ್ಜುನನ ಪೂಜೆ, ಜಪ, ದ್ಯಾನಗಳಲ್ಲಿ ಮಗ್ನಳಾಗುತ್ತಿದ್ದಳು. ಮುಂದೆ ಕೊಂಡವಿಡಿನ ರಾಜವಂಶಸ್ಥ ಭರಮರೆಡ್ಡಿಯ ಜೊತೆ ವಿವಾಹ ಮಾಡಿಕೊಡಲಾಯಿತು ಎಂದು ತಿಳಿಸಿದರು.

ಹೇಮರಡ್ಡಿ ಮಲ್ಲಮ್ಮನವರ ಮೈದುನ ವೇಮನು ನೃತ್ಯಗಾರ್ತಿಯ ಮೋಹಕ್ಕೆ ಬಲಿಯಾಗಿ ಮನೆಯಲ್ಲಿನ ಒಡವೆಗಳನ್ನು ಕದ್ದು ಕೊಡುತ್ತಿದ್ದನು. ಮೈದುನ ವೇಮನನ್ನು ತಿದ್ದಿ, ಬುದ್ದಿ ಹೇಳಿ ಮನಃಪರಿವರ್ತನೆ ಮಾಡುತ್ತಾರೆ. ಅಂದಿನಿಂದ ವೇಮನು ಸುಪ್ರಸಿದ್ದ ಮಹಾಯೋಗಿ ವೇಮನಾಗಿ ಬೆಳೆಯುತ್ತಾನೆ ಎಂದು ಅವರು ವಿವರಿಸಿದರು.

ಮಹಾಸಾಧ್ವಿ ಶಿವಶರಣೆಯಾಗಿ ಬೆಳಗಿದ ಹೇಮರಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣರಂತೆ ವಚನಗಳನ್ನು ರಚಿಸಲಿಲ್ಲವಾದರೂ ಅವರ ಬದುಕೇ ಒಂದು ಬೃಹತ್ ವಚನ ಸಂಪುಟದಂತೆ ಇದೆ. ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಕಾಣಿಕೆಗಳಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಪೌರಾಯುಕ್ತರಾದ ರಮೇಶ ಸುಣಗಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಹಾಗೂ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯೋತ್ಸವ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಮರಡ್ಡಿಗೌಡ ತಂಗಡಗಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಮುಖಂಡರು, ಸಮಾಜದವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕರಾದ ಚಂದ್ರಶೇಖರ ಗೋಗಿ ಹಾಗೂ ಕಲಾ ತಂಡದವರು ನಾಡಗೀತೆ ಹಾಡಿದರು. ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button