ಹುಂಡೆಕಲ್ ಕೆರೆ ಹೂಳೆತ್ತುವ ಕಾರ್ಯ ಯಶಸ್ಸಿನತ್ತ.!
ಕೆರೆಗಳ ಹೂಳೆತ್ತುವಿಕೆಯಿಂದ ಅಂತರ್ಜಲ ಹೆಚ್ಚಳ
ಯಾದಗಿರಿ, ಶಹಾಪುರಃ ಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ 10 ಲಕ್ಷ ರೂ. ಮಂಜೂರಾಗಿದ್ದು, ಜೆಸಿಬಿ, ಹಿಟಾಚಿ ಯಂತ್ರಗಳ ಸಹಾಯದಿಂದ ಕೆರೆಯ ಹೂಳೆತ್ತಲು ನಿರಂತರ ಕ್ರಮಕೈಗೊಳ್ಳಲಾಗಿದೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯ ಶಾಖಾ ಯೋಜನಾಧಿಕಾರಿ ನಾಗರಾಜ ತಿಳಿಸಿದರು.
ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಂಡೇಕಲ್ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯ ಸಹಕಾರದೊಂದಿಗೆ ಕೈಗೊಂಡ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ಕೆರೆ ಹೂಳೆತ್ತಲು ನಮ್ಮ ಧರ್ಮಸ್ಥಳ ಸಂಸ್ಥೆಯಡಿ ಮೊದಲಿಗೆ ಬಸವೇಶ್ವರ ಕೆರೆ ಬಳಕೆದಾರ ಸಂಘ ರಚನೆ ಮಾಡಿ, ಅದರ ಅಧ್ಯಕ್ಷ ಮತ್ತು ಇತರರಿಗೆ ಜವಬ್ದಾರಿ ವಹಿಸಲಾಗಿತ್ತು. ಬಳಕೆದಾರರ ಸಂಘದ ಅಧ್ಯಕ್ಷರು ಮತ್ತು ಇತರರು ನಿರಂತರ ಶ್ರಮವಹಿಸಿ ಹೂಳನ್ನು ರೈತರು ತಮ್ಮ ಹೊಲ ಗದ್ದೆಗಳಿಗೆ ತೆಗೆದುಕೊಂಡು ಹೋಗುವಂತೆ ಜಾಗೃತಿ ಮೂಡಿಸಿದ್ದು, ಅಲ್ಲದೆ ಅದರಿಂದ ಹೊಲ ಗದ್ದೆಗಳಲ್ಲಿ ಬೆಳೆಯುವ ಬೆಳೆ ಫಸಲು ಹೇಗೆ ಬರಲಿದೆ ಎಂಬುದನ್ನು ಮನದಟ್ಟು ಮಾಡಿಕೊಡಲಾಗಿತ್ತು.
ಹೀಗಾಗಿ ಕೆರೆ ಹೂಳೆತ್ತುವಲ್ಲಿ ಯಾವುದೆ ತೊಂದರೆಯಾಗಿಲ್ಲ. ಸರಾಗವಾಗಿ ಕಾಮಗಾರಿ ಕೆಲಸ ಮುಗಿದಿದೆ. ಕೆರೆಗೆ ನೀರು ಸಂಗ್ರಹಗೊಂಡಲ್ಲಿ ಪೂರ್ಣ ಬತ್ತಿ ಹೋಗಿದ್ದ ಅಂತರ ಜಲ ಚೇತರಿಕೆ ಕಾಣಲಿದೆ. ಇದರಿಂದ ಗ್ರಾಮದ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’
ಹೂಳೆತ್ತುವ ಕಾಮಗಾರಿ ವ್ಯವಸ್ಥಿತವಾಗಿ ನಡೆಯಲು ಬಸವೇಶ್ವರ ಕೆರೆ ಬಳಕೆದಾರರ ಸಂಘ ರಚನೆ ಮಾಡುವ ಮೂಲಕ ಕಾಮಗಾರಿ ನಿರಂತರವಾಗಿ ಯಶಸ್ಸಿನತ್ತ ಸಾಗಲು ಅನುಕೂಲವಾಗಿದೆ. ಇದುವರೆಗೂ ಅಂದಾಜು 18 ಸಾವಿರ ಟ್ರ್ಯಾಕ್ಟರ್ ಹೂಳನ್ನು ರೈತರು ತಮ್ಮ ಹೊಲ ಗದ್ದೆಗಳಿಗೆ ಸಾಗಾಟ ಮಾಡಿದ್ದಾರೆ. ಹೀಗಾಗಿ ಕೆರೆ ಹೂಳು ತೆಗೆಯುವಲ್ಲಿ ತುಂಬಾ ಅನುಕೂಲವಾಗಿದೆ.
ಮತ್ತು ಕೆರೆಯ ಏರಿ ರಚನೆ, ರಾಜ ಕಾಲುವೆ ಇತ್ಯಾದಿ ಕೆಲಸ ಮಾಡಲಾಗಿದೆ. ಕೆರೆಯ ಹೂಳೆತ್ತುವ ಕಾಮಗಾರಿ ಕೈಗೊಂಡಾಗಿನಿಂದ ನಿರಂತರ ಕೆಲಸದ ಮುಂದೆ ನಿಂತು ಸಮರ್ಪಕವಾಗಿ ಎಲ್ಲವನ್ನು ಬಳಕೆದಾರರ ಸಂಘದ ಅಧ್ಯಕ್ಷ ಶಿವರಡ್ಡಿ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಾರೆ.
ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮುಂದೆ ಮಳೆ ಬಂದು ನೀರು ಸಂಗ್ರಹಗೊಂಡಲ್ಲಿ ಅಂತರ ಜಲ ಚೇತರಿಕೆ ಕಾಣಲಿದೆ. ರೈತಾಪಿ ಜನರಿಗೆ ತುಂಬಾ ಅನುಕೂಲವಾಗಲಿದೆ. ಗ್ರಾಮಸ್ಥರ ಸಹಕಾರವು ಅಭಿನಂದನೆಗೆ ಅರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ದಿನೇಶ, ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಶಿವರಡ್ಡಿ, ಬಸವರಾಜ ಹಾಗೂ ಮೇಲ್ವಿಚಾರಕ ಚನ್ನಮಲ್ಲಯ್ಯ ಮತ್ತು ಸೇವಾ ಪ್ರತಿನಿಧಿ ಅಯ್ಯಣ್ಣ ಇತರರಿದ್ದರು.