ಪ್ರಮುಖ ಸುದ್ದಿ
ಸಿಎಂ ಕುಮಾರಸ್ವಾಮಿಯಿಂದ ನಾಳೆ ವಿಶ್ವಾಸ ಮತ ಬದಲು ವಿದಾಯ ಭಾಷಣ?
ಬೆಂಗಳೂರು: ನಾವೆಲ್ಲ ಒಗ್ಗಟ್ಟಾಗಿದ್ದು ನಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ನಿರ್ಣಯದಿಂದ ಹಿಂದೆ ಸರಿಯುವುದಿಲ್ಲ . ನಾಳೆ ನಡೆಯಲಿರುವ ವಿಶ್ವಾಸಮತಕ್ಕೆ ಯಾವುದೇ ಕಾರಣಕ್ಕೂ ನಾವು ಹಾಜರಾಗುವುದಿಲ್ಲ. ನಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದೇವೆ ಎಂದು ಅತೃಪ್ತ ಶಾಸಕರು ಮುಂಬೈನಿಂದ ಮೈತ್ರಿ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಅತೃಪ್ತ ಶಾಸಕರು ವಿಶ್ವಾಸ ಮತಕ್ಕೆ ಹಾಜರಾಗುವುದಿಲ್ಲ ಎಂಬ ಸಂದೇಶ ಸಿಗುತ್ತಿದ್ದಂತೆ ಇತ್ತ ಸಿಎಂ ಕುಮಾರಸ್ವಾಮಿ ನಾಳೆ ವಿಶ್ವಾಸ ಮತ ಯಾಚನೆಗೂ ಮುನ್ನವೇ ವಿದಾಯ ಭಾಷಣ ಮಾಡಿ ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದು ವಿಶ್ವಾಸ ಮತ ಗೆಲ್ಲುವುದು ಕಷ್ಟಕರವಾಗಿದೆ. ಕಾರಣ ಕಾಂಗ್ರೆಸ್ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು ಸಭೆ ಬಳಿಕ ಸಿಎಂ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.