ಮುಗಿಯದ ಕಥೆ : ಸೋಮವಾರಕ್ಕೆ ವಿಶ್ವಾಸ ಮತ ಮುಂದೂಡಿಕೆ?
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಇಂದು ಸಹ ರಾಜ್ಯಪಾಲರ ಸೂಚನೆ, ಸುಪ್ರೀಕೋರ್ಟ್ ತೀರ್ಪು ಹಾಗೂ ವಿಶ್ವಾಸ ಮತ ಪ್ರಕ್ರಿಯೆ ಮುಂದೂಡುವ ಬಗ್ಗೆ ಚರ್ಚೆ ನಡೆದಿದೆ. ಸಚಿವ ಕೃಷ್ಣಭೈರೇಗೌಡ ಸವಿವರವಾಗಿ ಮಾತಾಡಿದ್ದು ವಿಶ್ವಾಸ ಮತ ಮುಂದೂಡಲು ಮನವಿ ಮಾಡಿದ್ದಾರೆ. ಅಂತೆಯೇ ಇಪ್ಪತ್ತು ಜನ ಶಾಸಕರು ಈ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಮದ್ಯಾನದ 1:30 ರ ಒಳಗೆ ವಿಶ್ವಾಸ ಮತ ಪ್ರಕ್ರಿಯೆ ಮುಕ್ತಾಯಗೊಳಿಸಲು ರಾಜ್ಯಪಾಲರು ಸೂಚಿಸಿದ್ದು ಅವರ ಸೂಚನೆ ಪಾಲಿಸಿ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಆದರೆ, ನಿಮ್ಮ ಅವಸರಕ್ಕಾಗಿ ಚರ್ಚೆ ಮುಗಿಯುವವರೆಗೆ ವಿಶ್ವಾಸಮತ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಸ್ಪೀಕರ್ ರಮೇಶ ಕುಮಾರ್ ಸದನದಲ್ಲಿ ತಿಳಿಸಿದ್ದು ಭೋಜನ ವಿರಾಮ ಘೋಷಿಸಿ 3 ಗಂಟೆಗೆ ಕಲಾಪ ಮುಂದೂಡಿದ್ದಾರೆ.
ಈ ನಡುವೆ ಸ್ಪೀಕರ್ ರಮೇಶಕುಮಾರ್ ಅವರು ರಾಜ್ಯಪಾಲರ ಭೇಟಿಗೆ ಸಮಯ ಅವಕಾಶ ಕೇಳಿದ್ದಾರೆ. ರಾಜ್ಯಪಾರ ಬಳಿಗೆ ತೆರಳಿ ಚರ್ಚಿಸುವ ಸಾಧ್ಯತೆ ಇದೆ. ಭೋಜನ ವಿರಾಮದ ಬಳಿಕವೂ ಚರ್ಚೆ ಮುಂದುವರೆಯಲಿದ್ದು ಕಲಾಪ ಸೋಮವಾರಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.