ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕ ದರ್ಶನಾಪುರ ಭರವಸೆ
ಮೌಲ್ಯಯುಕ್ತ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಪಾತ್ರ ಅನನ್ಯ
ಯಾದಗಿರಿ, ಶಹಾಪುರ: ಮೌಲ್ಯಯುಕ್ತ ಸಮಾಜ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಅನನ್ಯವಾಗಿದೆ. ಈ ದಿಸೆಯಲ್ಲಿ ಮಾಧ್ಯಮದವರು ಗುರುತರ ಜವಾಬ್ದಾರಿ ಹೊಂದಿದ್ದಾರೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲುಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಜಯ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ ನ್ಯಾಯಾಂಗದಂತೆ ಪತ್ರಿಕಾ ರಂಗವು ಶ್ರೇಷ್ಠವಾಗಿದೆ. ಜನತೆಗೆ ಸುದ್ದಿ ತಿಳಿಸುವಾಗ ಸಮಗ್ರ ತನಿಖೆ ಮತ್ತು ಪರಿಶೀಲನೆ ಹಾಗೂ ವಸ್ತು ನಿಷ್ಠತೆಯನ್ನು ಅಗತ್ಯವಾಗಿ ಒಳಗೊಂಡಿರಬೇಕು. ಆ ನಿಟ್ಟಿನಲ್ಲಿ ಪತ್ರಕರ್ತರು ಶ್ರಮಿಸಬೇಕಾಗುತ್ತದೆ.
ದೃಶ್ಯ ಮಾಧ್ಯಮಗಳು ಆನ್‍ಲೈನ್ ಪತ್ರಿಕೆಗಳ ಭರಾಟೆ ಜೋರಾಗಿದ್ದರೂ ದಿನಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗಿಲ್ಲ. ಬೆಳಗ್ಗೆ ಮನೆಗಳಲ್ಲಿ ಮೊದಲು ದಾರಿ ನೋಡುವುದೇ ಪತ್ರಿಕೆಯದ್ದು, ಪತ್ರಿಕೆಯಿಂದ ಇಡಿ ದೇಶ ವಿದೇಶದ ಸುದ್ದಿ ಸಮಾಚಾರವನ್ನು ತಿಳಿಯಬಹುದು ಎಂದರು.
ದೇಶದ ಸುಭದ್ರತೆಗೆ ಸಮಾಜದ ಅಭ್ಯುದಯಕ್ಕೆ ಪತ್ರಿಕಾ ರಂಗ ಪೂರಕವಾಗಿದ್ದು, ಪತ್ರಕರ್ತರು ಸಮಾಜದ ಸುಧಾರಣೆಯತ್ತ ಹಾಗೂ ಜಾಗೃತಿಗಾಗಿ ಉತ್ತಮ ಸುದ್ದಿ ಸಮಾಚಾರಗಳನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಶಹಾಪುರದಲ್ಲಿ ಪತ್ರಕರ್ತರಿಗಾಗಿ ಸೂಕ್ತ ನಿವೇಶನದೊಂದಿಗೆ ಪತ್ರಿಕಾ ಭವನ ನಿರ್ಮಿಸುವಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಗರದ ಏಕದಂಡಿಗಿ ಮಠದ ಅಜಯೇಂದ್ರ ಸ್ವಾಮಿಗಳು ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪತ್ರಿಕಾ ಮಾಧ್ಯಮ ಅಗತ್ಯವಿದ್ದು, ಕ್ರೀಯಾಶೀಲ ಸಂವೇದನಾಶೀಲತೆಗಳ ಸುದ್ದಿ ಸಮಾಚಾರಗಳು ಪ್ರಸ್ತುತ ಪಡಿಸಿದಾಗ ಅಭಿವೃದ್ಧಿಗೆ ನಾಂದಿಯಾಗುತ್ತದೆ.
ಪತ್ರಿಕೆಗಳು ಕಲೆ, ಸಾಹಿತ್ಯ, ಸಂಸ್ಕøತಿ, ವಾಣಿಜ್ಯ, ಕ್ರೀಡೆ, ಮನೊರಂಜನೆ, ಜನಸಾಮಾನ್ಯರಿಗೂ ತಿಳಿಸುವ ದೊಡ್ಡ ಸಾಧನವಾಗಿದೆ, ದಿನನಿತ್ಯ ಪತ್ರಿಕೆ ಓದುವುದರಿಂದ ಭಾಷಾ ಕೌಶಲ್ಯ ಹೆಚ್ಚಾಗುತ್ತದೆ, ಪ್ರಸ್ತುತ ಸಂದರ್ಭದಲ್ಲಿ ವರದಿಗಾರರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು ಮಾಧ್ಯಮ ಕ್ಷೇತ್ರ ಇನ್ನಷ್ಟು ಬೆಳಕು ಚೆಲ್ಲುವಂತಾಗಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಸಮಾಜದ ನಾನಾ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಕ್ಕಳ ಸಾಹಿತಿ ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಚಂದ್ರಕಾಂತ ಕರದಳ್ಳಿ, ಕಳೆದ ಐವತ್ತು ವರ್ಷಗಳಿಂದ ನಾನಾ ಪತ್ರಿಕೆಗೆ ಏಜೆಂಟರಾಗಿ ಸಾರ್ಥಕ ಕಾರ್ಯ ನಿರ್ವಹಿಸಿದ ರಘುನಾಥರಾವ್ ತಿಳಗೂಳ, ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯೊನ್ಮುಖರಾದ ಸಿದ್ದಲಿಂಗಣ್ಣ ಆನೇಗುಂದಿ, ರಾಜ್ಯ ಮಟ್ಟದ ಹೂಗಾರ ಪ್ರಶಸ್ತಿ ವಿಜೇತ ಲಕ್ಷ್ಮಿಕಾಂತ ಕುಲಕರ್ಣಿ, ಪ್ರಗತಿಪರ ರೈತ ನೀಲಕಂಠ ಕಡಗಂಚಿ, ಅನಾಥ ಶವಗಳು ಮತ್ತು ಅಪಘಾತ ಸಂದರ್ಭದಲ್ಲಿ ಶವಗಳನ್ನು ತನ್ನ ಸ್ವಂತ ಆಟೋದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಆಸ್ಪತ್ರೆಗೆ ಸಾಗಿಸುವ ಆಟೋ ಚಾಲಕ ಇಕ್ಬಾಲ್ ಪಠಾಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ಲದೆ ಪ್ರತಿ ದಿನ ಮನೆ ಮನೆಗಳಿಗೆ ಪತ್ರಿಕೆಗಳನ್ನು ವಿತರಣೆ ಮಾಡುವ ಭೀಮರಾಯ ಪೂಜಾರಿ, ದತ್ತಾತ್ರೇಯ, ಪವನ, ಭೀಮರಾಯ ಹುರಸಗುಂಡಗಿ, ಶಿವಪ್ಪ, ಸುಲ್ತಾನ್ ಸಾಬ್ ಅವರನ್ನು ಸನ್ಮಾನಿಸಲಾಯಿತು.
ಡಾ.ಶರಣು ಗದ್ದುಗೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ನಗರದ ಹಿರಿಯ ಮುಖಂಡ ಚಂದ್ರಶೇಖರ ಸಾಹು ಆರಬೋಳ, ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಮ್.ಜಗದೀಶ, ತಾ.ಕಾ.ನಿ.ಪ.ಸಂಘದ ಅಧ್ಯಕ್ಷ ನಾರಾಯಣಚಾರ್ಯ ಸಗರ ಉಪಸ್ಥಿತರಿದ್ದರು. ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ಹೇರುಂಡಿ, ಚನ್ನಬಸವ ವನದುರ್ಗ, ಶಿವಣ್ಣ ಇಜೇರಿ, ವಿಶ್ವರಾಧ್ಯ ಸಂತ್ಯಂಪೇಟ, ಅಡಿವೆಪ್ಪಾ ಜಾಕಾ, ಸಣ್ಣ ನಿಂಗಣ್ಣ ನಾಯ್ಕೋಡಿ, ವಸಂತಕುಮಾರ ಸುರಪುರಕರ್, ಶಿವಕುಮಾರ ತಳವಾರ, ಸಂಗಣ್ಣ ಅನವಾರ ಇತರರು ಇದ್ದರು.
ಶಾಮಲಾ, ಶ್ರೀದೇವಿ ಪ್ರಾರ್ಥಿಸಿದರು. ಕಲಾವಿದರಾದ ಚಂದ್ರಶೇಖರ ಗೋಗಿ ಮತ್ತು ಚೆನ್ನಪ್ಪ ಸಾಥ್ ನೀಡಿದರು. ಬಸವರಾಜ ಸಿನ್ನೂರ ನಿರೂಪಿಸಿದರು. ನಾಗೇಂದ್ರಸಿಂಗ್ ಠಾಕೂರ್ ಸ್ವಾಗತಿಸಿದರು. ವಿಶಾಲ ದೋರನಹಳ್ಳಿ ವಂದಿಸಿದರು.