ಒಂದು ಕ್ಷಣ ಚಂದ್ರಶೇಖರ್ ಆಜಾದ್ ರನ್ನು ಸ್ಮರಿಸೋಣ ಬನ್ನಿ…
ಚಂದ್ರಶೇಖರ ಆಜಾದ್ ಎಂದೇ ಖ್ಯಾತಿ ಗಳಿಸಿರುವ ಚಂದ್ರಶೇಖರ ಸೀತಾರಾಮ್ ತಿವಾರಿಯವರು ಜುಲೈ 23, 1906ರಲ್ಲಿ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಗ್ರಾಮದಲ್ಲಿ ಜನಿಸಿದರು. ಭಾರತ ಸ್ವತಂತ್ರ ಸಂಗ್ರಾಮದಲ್ಲಿ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡ ಅವರನ್ನು ಭಗತ್ ಸಿಂಗ್ರ ಮಾರ್ಗದರ್ಶಕ, ಗುರು ಎಂದು ಪರಿಗಣಿಸಲಾಗಿದೆ..
ಓರ್ವ ಶ್ರದ್ಧಾವಂತ ಯುವಕ ಆಜಾದ್ ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ಹೋರಾಡುವುದು ತಮ್ಮ ಧರ್ಮ ಎಂದು ನಂಬಿದ್ದರು. ಹೋರಾಟಕ್ಕಿಳಿದ ಯೋಧ ಎಂದಿಗೂ ಶಸ್ತ್ರವನ್ನು ತ್ಯಜಿಸಬಾರದು ಎಂಬುದು ಅವರ ಅಚಲ ನಿಲುವಾಗಿತ್ತು. 1919ರಲ್ಲಿ ಅಮೃತಸರದಲ್ಲಿ ನಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದ್ರವರು ಮಾನಸಿಕವಾಗಿ ತೀವ್ರ ಜರ್ಜರಿತರಾಗಿದ್ದರು. ಮಹಾತ್ಮ ಗಾಂಧಿಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ,ನಡೆದ ಪ್ರತಿಭಟನೆಗಳಲ್ಲಿಅವರು ಸಕ್ರಿಯವಾಗಿ ಭಾಗಿಯಾಗಿದ್ದರು. ನಾಗರಿಕ ಶಾಸನ ಭಂಗಕ್ಕಾಗಿ ಅವರು ಬಂಧಿತರಾಗಿದ್ದರು. ಹದಿನೈದನೇ ವಯಸ್ಸಿನಲ್ಲಿಯೇ ಪ್ರಥಮ ಬಾರಿಗೆ ಶಿಕ್ಷೆಗೆ ಗುರಿಯಾಗಿದ್ದರು.
ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟರು ಅವರ ಹೆಸರೇನೆಂದು ಕೇಳಿದಾಗ, ಅವರು ‘ಆಜಾದ್’ ಎಂದು ಹೇಳಿದರು. ಆಜಾದ್ ಎಂದರೆ ‘ಸ್ವತಂತ್ರ ವ್ಯಕ್ತಿ’ ಎಂದು ಅರ್ಥ. ಪರಿಣಾಮ ಉದ್ಧಟತನ ಪ್ರದರ್ಶನ ಆರೋಪದ ಮೇಲೆ ಅವರಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು. ಛಾಟಿಯಿಂದ ಹೊಡೆದ ಪ್ರತಿ ಏಟಿಗೂ ಯುವಕ ಚಂದ್ರಶೇಖರ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆಯ ಪ್ರತಿಕ್ರಿಯೆ ನೀಡುತ್ತಿದ್ದರು. ಈ ಘಟನೆಯ ನಂತರ, ಚಂದ್ರಶೇಖರರಿಗೆ ಆಜಾದ್ ಎಂಬ ಬಿರುದು ಬಂದಿತು. ಆಗಿನಿಂದ ಚಂದ್ರಶೇಖರ ಆಜಾದ್ ಎಂದೇ ಗುರುತಿಸಲ್ಪಟ್ಟರು.
ಅಸಹಕಾರ ಚಳುವಳಿಯು ಸ್ಥಗಿತಗೊಂಡ ನಂತರ, ಆಜಾದ್ ಅವರೊಳಿಗಿನ ಸ್ವತಂತ್ರ್ಯ ಹೋರಾಟದ ಕಿಚ್ಚು ಕ್ರಾಂತಿಕಾರಿ ಹೋರಾಟಗಾರನ ರೂಪದಲ್ಲಿ ಹೊರಹೊಮ್ಮಿತು. ಯಾವುದೇ ಮಾರ್ಗದಿಂದಾದರೂ ಸರಿ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮನ್ನು ಮುಡಿಪಾಗಿಡಲು ಅವರು ನಿರ್ಧರಿಸಿದರು.
ಸ್ವತಂತ್ರ ಭಾರತ ಹೋರಾಟಕ್ಕಾಗಿ ಮುಂದುವರೆದ ಪ್ರಥಮ ಹೆಜ್ಜೆಯಾಗಿ ಅವರು ‘ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (HSRA) ಎಂಬ ಸಂಘಟನೆಯನ್ನು ಆರಂಭಿಸಿದರಲ್ಲದೇ ಭಗತ್ ಸಿಂಗ್, ಸುಖದೇವ್, ಬಟುಕೇಶ್ವರ ದತ್ತ ಮತ್ತು ರಾಜಗುರುರಂತಹ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದೇ HSRA ಸಂಘಟನೆಯ ಗುರಿಯಾಗಿತ್ತು.
ಸಮಾಜವಾದಿ ಮೂಲತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹೋದ್ದೇಶವನ್ನು ಅದು ಹೊಂದಿತ್ತು. ಆಜಾದರು ದೇಶಬಾಂಧವರೊಟ್ಟಿಗೆ ಬ್ರಿಟಿಷರ ವಿರುದ್ಧ ಅನೇಕ ಕ್ರಾಂತಿಕಾರಿ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು. ಕಾಕೊರಿ ರೈಲು ದರೋಡೆ (1925), ವೈಸರಾಯ್ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ (1926), ಮತ್ತು ಲಾಲಾ ಲಜಪತ ರಾಯ್ರನ್ನು ಹತ್ಯೆಗೈದುದರ ಪ್ರತೀಕಾರವಾಗಿ ಲಾಹೋರ್ನಲ್ಲಿ (1928) ಜಾನ್ ಪಾಯಂಟ್ಜ್ ಸಾಂಡರ್ಸ್ನನ್ನು ಗುಂಡು ಹಾರಿಸಿ ಕೊಂದ ಪ್ರಕರಣ ಸೇರಿ ಅನೇಕ ಚಟುವಟಿಕೆಗಳಲ್ಲಿ ಆಜಾದರು ಭಾಗವಹಿಸಿದ್ದರು.
1931ರ ಫೆಬ್ರವರಿ 27ರಂದು, ಚಂದ್ರಶೇಖರ ಆಜಾದ್ ಅಲಹಾಬಾದ್ನ ಆಲ್ಫ್ರೆಡ್ ಉದ್ಯಾನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಟಿ ಮಾಡಲು ಬಂದಾಗ ಅವರನ್ನು ಪೊಲೀಸರು ಗುರುತು ಹಿಡಿದರು. ಇಡೀ ಉದ್ಯಾನವನ್ನು ಸುತ್ತುವರಿದ ಪೊಲೀಸರು ಚಂದ್ರಶೇಖರ ಆಜಾದ್ರಿಗೆ ಶರಣಾಗುವಂತೆ ಆದೇಶಿಸಿದರು. ಆಜಾದರು ಏಕಾಂಗಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರನ್ನು ಕೊಂದರು. ಅದೇ ವೇಳೆ ಆಜಾದ್ ಅವರ ತೊಡೆಗೆ ಪೊಲೀಸರ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದು ಗುಂಡುಗಳೆಲ್ಲಾ ಖಾಲಿಯಾದ ನಂತರ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡರು.
ಅಷ್ಟೊಂದು ಪೊಲೀಸರ ಮಧ್ಯೆ ಅಭಿಮನ್ಯುವಿನಂತೆ ಹೋರಾಡಿದ ಆಜಾದ್ ಅವರಿಗೆ ಎಷ್ಟೊಂದು ಸುವ್ಯವಸ್ಥಿತ ಜಾಗೃತಿ ಇತ್ತೆಂದರೆ ಅವರ ಪಿಸ್ತೂಲಿನಲ್ಲಿ ಒಂದಾದ ನಂತರ ಒಂದು ಗುಂಡುಗಳು ಕಾಲಿಯಾಗುತ್ತಿದ್ದರೂ ಕೊನೆಯ ಗುಂಡಿನ ಲೆಕ್ಕ ಸಹ ಖಚಿತವಾಗಿತ್ತು. ಆ ಕೊನೆಯ ಗುಂಡಿನ ಲೆಕ್ಕದ ಅರಿವು ದೊರೆತ ತಕ್ಷಣದಲ್ಲಿ ಅದನ್ನು ತಮ್ಮ ತಲೆಗೆ ಗುರಿ ಇಟ್ಟುಕೊಂಡರು. ತಮ್ಮನ್ನು ಯಾವುದೇ ಕ್ಷಣದಲ್ಲೂ ಬ್ರಿಟಿಷರಿಗೆ ಒಪ್ಪಿಸಿಕೊಳ್ಳದೆ, ಬ್ರಿಟಿಷ್ ಹಿಂಸೆ, ದಮನಕಾರಿ ಪ್ರವೃತ್ತಿಗಳಿಗೆ ಅದೇ ಮಾದರಿಯಲ್ಲಿ ಉತ್ತರ ನೀಡಿ ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನರಾಗಿದ್ದರು ಚಂದ್ರಶೇಖರ್ ಆಜಾದ್.
ಅವರ ಮಹಾನ್ ವ್ಯಕ್ತಿತ್ವ ನೆನೆದಾಗಲೆಲ್ಲಾ ದೇಶಭಕ್ತಿಯನ್ನು ಪ್ರಜ್ವಲಿಸುವ ಅಮರ ಜ್ಯೋತಿಯ ಉದ್ದೀಪನವಾದಂತೆನಿಸುತ್ತದೆ. ಅವರ ಬದುಕಿನಲ್ಲಿ ಜಾಗೃತವಾಗಿದ್ದ ಸುಸಂಸ್ಕೃತ ನಡಾವಳಿ, ಹಿರಿಯರ ಬಗ್ಗೆ ಗೌರವ, ದೇಶಕ್ಕಾಗಿ ಏನನ್ನೂ ಮಾಡಲು ಸಿದ್ಧರಿದ್ಧ ಭಕ್ತಿನಿಷ್ಠೆಗಳು ನಿರಂತರ ಮನನಯೋಗ್ಯವಾಗಿವೆ.
ಆ ಮಹಾನ್ ರಾಷ್ಟ್ರಯೋಧರ ಚೇತನಕ್ಕೆ ಶಿರಬಾಗಿ ನಮಿಸೋಣ.
ಇಂಕ್ವಿಲಾಬ್ ಜಿಂದಾಬಾದ್…