ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ಹಾಸ್ಯದರಸ ನರಸಿಂಹರಾಜು : ವಿನೋದ, ವಿಷಾದ, ವಿಶಿಷ್ಟ…

ಜನನ: 24 ಜುಲೈ, 1923 – ನಿಧನ:11 ಜುಲೈ, 1979

ಅಭಿನಯದ ಮೂಲಕವೇ ಕರುನಾಡಿನ ಕಲಾಭಿಮಾನಿಗಳನ್ನು ನಕ್ಕುನಗಿಸಿ ಅಚ್ಚಳಿಯದೇ ಉಳಿದ ಹಾಸ್ಯದರಸ ನಟ ನರಸಿಂಹರಾಜು ಅವರು ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದರು. 1926ರಿಂದ 1979ರವರೆಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ನರಸಿಂಹರಾಜು ಹಾಸ್ಯನಟರಾಗಿ ಬೆಳೆದ ಪರಿ ಅದ್ಭುತ. ಚಲನಚಿತ್ರಗಳಲ್ಲಿ ನಟಸಾರ್ವಭೌಮ ಡಾ. ರಾಜ್ ಕುಮಾರ್ ನಾಯಕ ನಟರಾಗಿದ್ದರೆ ಅವರ ಮಿತ್ತನ ಪಾತ್ರಕ್ಕೆ ನರಸಿಂಹರಾಜು ಆಯ್ಕೆ ನಿಶ್ಚಿತವಾಗಿರುತ್ತಿತ್ತು. ನಾಯಕನ ಗೆಳೆಯ, ಸಹೋದ್ಯೋಗಿ, ಸಹಾಯಕ ಹೀಗೆ ಯಾವುದಾದರೂ ಒಂದು ಪಾತ್ರ ಸೃಷ್ಟಿಸಿ ನರಸಿಂಹ ರಾಜು ಅವರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.

ನರಸಿಂಹರಾಜು ಅವರು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಪೊಲೀಸ್ ಪೇದೆ ಆಗಿದ್ದ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ 24 ಜುಲೈ, 1923ರಲ್ಲಿ ಜನಿಸಿದರು. ರಂಗಭೂಮಿ ಕಲಾವಿದರಾಗಿದ್ದ
ಚಿಕ್ಕಪ್ಪನ ಲಕ್ಷ್ಮೀಪತಿರಾಜು ಅವರತ್ತ ಆಕರ್ಷಿತರಾಗಿ ಚಿಕ್ಕಂದಿನಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಬಾಲನಟನಾಗಿ ಖ್ಯಾತಿ ಪಡೆದ ಅವರು 1954ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಬೇಡರಕಣ್ಣಪ್ಪ ಚಿತ್ರದಲ್ಲಿ ಕಾಶಿ ಪಾತ್ರದಲ್ಲಿ ಕಾಣಿಸಿಕೊಂಡ ನರಸಿಂಹ ರಾಜು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಹಾಸ್ಯನಟ ನರಸಿಂಹರಾಜು ಮಕ್ಕಳರಾಜ್ಯ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿ ಮಿಂಚಿದರು, ಸತ್ಯಹರಿಶ್ಚಂದ್ರ ಚಿತ್ರದಲ್ಲಿ ನಕ್ಷತ್ರಿಕರಾಗಿ ಮಾಡಿದ ಪಾತ್ರ ಯಾರೂ ಮರೆಯುವಂತಿಲ್ಲ. ನಂತರ ನೂರಾರು ಚಿತ್ರಗಳಲ್ಲಿ ಹಾಸ್ಯನಟರಾಗಿ ವಿಜೃಂಭಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಿತ್ರದ ಮೂಲಕ ನಾಯಕ ನಟರಾಗಿಯೂ ಅಭಿನಯಿಸಿದರು. ಹಲವು ಚಿತ್ರಗಳಲ್ಲಿ ದ್ವಿಪಾತ್ರ, ತ್ರಿಪಾತ್ರಗಳಲ್ಲೂ ಮನಸೂರೆಗೊಂಡರು.

ಭಕ್ತ ಮಲ್ಲಿಕಾರ್ಜುನ, ಭಕ್ತ ಮಾರ್ಕಂಡೇಯ, ಅಣ್ಣ ತಂಗಿ, ರಣಧೀರ ಕಂಠೀರವ, ದಶಾವತಾರ, ಜೇನುಗೂಡು, ಅಮರಶಿಲ್ಪಿ ಜಕಣಾಚಾರಿ ಮೊದಲಾದ ಚಿತ್ರಗಳಲ್ಲಿ ತಮ್ಮ ಅಪ್ರತಿಮ ನಟನಾ ಕೌಶಲ್ಯ, ಮುಖಭಂಗಿ, ಸಂಭಾಷಣೆ, ಮಾತಿನ ಶೈಲಿ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಅಂತೆಯೇ ಅನೇಕ ಚಿತ್ರಗಳಲ್ಲಿ ವಿನೋದದ ಜತೆಗೆ ವಿಷಾಧವನ್ನೂ ಅಷ್ಟೇ ಅಚ್ಚುಕಟ್ಟಾಗಿ ಅಭಿನಯಿಸಿ ಪ್ರೇಕ್ಷಕರ ಕಣ್ಣು ತೇವಗೊಳಿಸಿದ್ದೂ ಉಂಟು. ವಿಶಿಷ್ಟ ಅಭಿನಯದ ನರಸಿಂಹರಾಜು ಅವರಿಗೆ ನರಸಿಂಹರಾಜು ಅವರೇ ಸಾಟಿ!

Related Articles

Leave a Reply

Your email address will not be published. Required fields are marked *

Back to top button