ಪ್ರಮುಖ ಸುದ್ದಿ

ಕಾರ್ಗಿಲ್ ವಿಜಯ ದಿವಸ್ : ಕಾರ್ಗಿಲ್ ಕಲಿಗಳ ನೆನೆಯೋಣ ಬನ್ನಿ…

ವಿನಯ ಮುದನೂರ್

ಹಿಂದೂಸ್ತಾನದ ಕಾರ್ಗಿಲ್‌ಗೆ ಕನ್ನ ಹಾಕಿದ ಪಾಕಿಸ್ತಾನದ ಸೈನ್ಯವನ್ನು ನಮ್ಮ ವೀರ ಯೋಧರು ಹಿಮ್ಮೆಟ್ಟಿಸಿದ ದಿನ. ಕಾರ್ಗಿಲ್ ಬೆಟ್ಟಗಳ ಮೇಲೆ ನಮ್ಮ ಕಾರ್ಗಿಲ್ ಕಲಿಗಳು ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತೀಯರೆಲ್ಲ ಎದೆ ಉಬ್ಬಿಸುವ ಸಂದರ್ಭ ತಂದುಕೊಟ್ಟ ‘ವಿಜಯ ದಿವಸ್’ ಇಂದು. ಇಂದಿಗೆ ಕಾರ್ಗಿಲ್ ಕದನ ನಡೆದು ಬರೋಬ್ಬರಿ 20 ವರ್ಷಗಳು ಕಳೆದಿವೆ.

ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಸ್ತಾನಿಗಳನ್ನು ನಮ್ಮ ಸೇನೆ ಬೆನ್ನಟ್ಟಿ ಹೊರ ಹಾಕುವ ಮೂಲಕ ಅಂದು ಭಾರತೀಯ ಸೇನೆ ನಮ್ಮ ಶಕ್ತಿ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿತ್ತು. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ಯೋಧರ ತ್ಯಾಗವನ್ನು ಸ್ಮರಿಸಿ ಸಲಾಂ ಮಾಡಲೇಬೇಕಾದ ದಿನ ಜುಲೈ 26.

ಬೆಂಕಿಯಂಥ ಚಳಿಯಲ್ಲಿ, ರಕ್ತ ಹೆಪ್ಪುಗಟ್ಟಿಸುವ ಹಿಮದ ನಡುವೆ ಜೀವದ ಹಂಗು ತೊರೆದು ಹೋರಾಡಿ, ಮಾತೃಭೂಮಿಗಾಗಿ ಜೀವತೆತ್ತ ಸಾವಿರಾರು ಸೈನಿಕರು ನಮಗೆ ನೀಡಿ ಹೋದ ವಿಜಯ ದಿನವನ್ನು ನಾವು ವಿಜಯಾಭಿಮಾನದಿಂದ ಮತ್ತು ವೀರಕಲಿಗಳನು ಕಳೆದುಕೊಂಡ ವಿಷಾದದಿಂದ ಆಚರಿಸುವ ಸ್ಥಿತಿ. ನಮಗಾಗಿ ವೀರಮರಣವನ್ನಪ್ಪಿದ ವೀರಸೇನಾನಿಗಳ ನೆನಪಿನಲ್ಲಿ ತೇವಗೊಳ್ಳುವ ಕಣ್ಣು, ಅವರ ತ್ಯಾಗ, ಧೈರ್ಯ, ಸಾಹಸ, ಬಲಿದಾನ ನೆನೆದು ಉಬ್ಬುವ ಎದೆ ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾಗುತ್ತದೆ.

1999ರ ಮೇ 8 ರಿಂದ ಜುಲೈ 26 ರವರೆಗೆ ನಡೆದ 74 ದಿನಗಳ ಘೋರ ಕಾರ್ಗಿಲ್​ ಯುದ್ಧದಲ್ಲಿ 20 ಸಾವಿರ ಭಾರತೀಯ ಯೋಧರು ಭಾಗಿಯಾಗಿದ್ದರು. ಆ ಪೈಕಿ 527 ಯೋಧರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡರು. ಕಾಲ್ಕೆರೆದು ಯುದ್ಧಕ್ಕೆ ಬಂದಿದ್ದ ಪಾಕಿಸ್ತಾನದ ಪಾಪಿಗಳಿಗೆ ತಕ್ಕ ಉತ್ತರ ನೀಡಿ ಸೆದೆ ಬಡಿದಿದ್ದರು. ಯುದ್ಧದ ಸಮಯದಲ್ಲಿ ನಮ್ಮ ಭಾರತೀಯ ಯೋಧರು ಸುಮಾರು 18 ಸಾವಿರ ಅಡಿಗಳಷ್ಟು ಎತ್ತರದ ಕಡಿದಾದ ಪರ್ವತ ಹತ್ತಿ ಘನಘೋರ ಯುದ್ಧ ಮಾಡಿ ವಿಜಯ ಪತಾಕೆ ಹಾರಿಸಿದರು.

ಭಾರತಾಂಬೆಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಗಿಲ್‌ ಕಲಿಗಳಿಗೆ ಗ್ರೇಟ್ ಸೆಲ್ಯೂಟ್!

Related Articles

Leave a Reply

Your email address will not be published. Required fields are marked *

Back to top button