ಪ್ರಮುಖ ಸುದ್ದಿ
ಜಲಾವೃತ ಕೊಳ್ಳೂರು ಬ್ರಿಡ್ಜ್ ಮೇಲೆ ಹೆಡೆ ಬಿಚ್ಚಿದ ನಾಗ : ಸರ್ಪದರ್ಶನದ ಸೂಚನೆಯೇನು?
ಯಾದಗಿರಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾದ ಪರಿಣಾಮ ಜಲಾಶಯಗಳು ಭರ್ತಿಯಾಗಿದ್ದು ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಬಸವಸಾಗರ ಜಲಾಶಯದ 20 ಗೇಟ್ ಗಳಿಂದ 2.40ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ಕೊಳ್ಳೂರು ಸೇತುವೆ ಜಲಾವೃತಗೊಂಡಿದ್ದು ಮುಂಜಾಗೃತ ಕ್ರಮವಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಆದರೆ, ತುಂಬಿ ಹರಿಯುತ್ತಿರುವ ಕೃಷ್ಣ ನದಿಯಲ್ಲಿ ಆ ಹಾವು ಅದ್ಹೇಗೆ ಬಂತೋ ಗೊತ್ತಿಲ್ಲ. ಸೇತುವೆಗೆ ಅಳವಡಿಸಿರುವ ಪೈಪ್ ಗೆ ಸುತ್ತಿಕೊಂಡು ಹೆಡೆ ಬಿಚ್ಚಿದೆ. ಜಲಾವೃತವಾದ ಕೊಳ್ಳೂರು ಸೇತುವೆ ನೋಡಲು ತೆರಳಿದ ಮಂದಿ ಸರ್ಪದರ್ಶನದಿಂದ ಭಯಭೀತರಾಗಿದ್ದಾರೆ.
ನಿರಂತರ ಬರಗಾಲದಿಂದ ಸಂಕಷ್ಟ ಎದುರಿಸಿದ್ದ ಈ ಭಾಗದಲ್ಲಿ ಈವರ್ಷ ಜಲಾಶಯಗಳು ಭರ್ತಿಯಾಗಿ ಸೇತುವೆಗಳು ಮುಳುಗಡೆಯಾಗಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಈ ನಡುವೆ ನಾಗರ ಪಂಚಮಿ ಸಂದರ್ಭದಲ್ಲಿ ಜಲಾವೃತ ಸೇತುವೆ ಮೇಲೆ ಸರ್ಪದರ್ಶನವಾಗಿದ್ದು ಒಳಿತೋ ಅಥವಾ ಕೆಡುಕಿನ ಸೂಚನೆಯೋ ಎಂಬುದರ ಬಗ್ಗೆ ಗ್ರಾಮೀಣ ಜನ ಚರ್ಚೆಯಲ್ಲಿ ತೊಡಗಿದ್ದಾರೆ.