ಭ್ರಷ್ಟರ ವಿರುದ್ಧ ದೂರು ನೀಡಿ-ಎಸಿಬಿ ಅಧಿಕಾರಿ ಕೆ.ಎಸ್.ಕಲ್ಲದೇವರ
ಭ್ರಷ್ಟಾಚಾರ ನಿಗ್ರಹ ದಳಃ ಜನ ಸಂಪರ್ಕ ಸಭೆ
ಯಾದಗಿರಿ,ಶಹಾಪುರಃ ಜನ ಸಾಮಾನ್ಯ ತಮ್ಮ ಯಾವುದೇ ಇಲಾಖೆಯಲ್ಲಿ ಕೆಲಸ ಕಾರ್ಯಗಳಿದ್ದಲ್ಲಿ ಅಲ್ಲಿನ ಅಧಿಕಾರಿಗಳು ಸಿಬ್ಬಂದಿ ಹಣ ನೀಡುವಂತೆ ಬೇಡಿಕೆ ಇಟ್ಟಲ್ಲಿ ಅಥವಾ ಕೆಲಸ ಮಾಡಿಕೊಡಲು ಅಸಡ್ಡೆ ತೋರಿಸುವ ಮೂಲಕ ಹಣ ಕೀಳುವ ಹುನ್ನಾರವಿದ್ದಲ್ಲಿ ತಕ್ಷಣ ಎಸಿಬಿ ಕಚೇರಿಗೆ ದೂರು ಸಲ್ಲಿಸಿ ಎಂದು ಎಸಿಬಿ ಅಧಿಕಾರಿ ಕೆ.ಎಸ್.ಕಲ್ಲದೇವರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭ್ರಷ್ಟರ ವಿರುದ್ದ ಸಾರ್ವಜನಿಕರು ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬೇಕು. ದೂರು ನೀಡಿದ ನಂತರ ಅದಕ್ಕೆ ತಕ್ಕಂತೆ ನಾವು ಕಾರ್ಯಾಚರಣೆ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳನ್ನು ಖೆಡ್ಡಾಗೆ ಕೆಡವಲಿದ್ದೇವೆ. ಆ ಮೂಲಕ ಭ್ರಷ್ಟರಿಗೆ ತಕ್ಕ ಪಾಠ ಕಲಿಸಬೇಕಿದೆ. ಅದಕ್ಕೆ ನಾಗರಿಕರ ಸಹಕಾರ ಅಗತ್ಯ.
ಸರ್ಕಾರಿ ವಿವಿಧ ಕಚೇರಿಗಳಲ್ಲಿ ನಡೆಯುವ ಅವ್ಯವಹಾರಕ್ಕೆ ಎಸಿಬಿ ಕಡಿವಾಣ ಹಾಕುವ ಸದುದ್ದೇಶ ಹೊಂದಿದೆ. ಸಾರ್ವಜನಿಕರು ಎಸಿಬಿಯ ಕಾರ್ಯಾಚಟುವಟಿಕೆಗಳನ್ನು ಅರಿತು ಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಸಿಬಿ ಸಿಬ್ಬಂದಿ ವರ್ಗ ಹಾಗೂ ನಗರ ನಿವಾಸಿಗಳು ಇತರರು ಭಾಗವಹಿಸಿದ್ದರು.