ಪ್ರಮುಖ ಸುದ್ದಿ

ಛಾಯಾಚಿತ್ರಗಾರಿಕೆ ಒಂದು ವಿಶಿಷ್ಟವಾದ ಕಲೆ-ಗದ್ದುಗೆ

ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ

ಯಾದಗಿರಿ,ಶಹಾಪುರಃ ಛಾಯಾಚಿತ್ರಗಾರಿಕೆ ಎನ್ನುವದು ಒಂದು ವಿಶೀಷ್ಟ ಕಲೆ ಅದು ಎಲ್ಲರಿಗೂ ಒಲಿಯುವದಿಲ್ಲ. ಪ್ರಸ್ತುತ ಎಲ್ಲರ ಕೈಯಲ್ಲಿ ಮೊಬೈಲ್ ಇರುವದರಿಂದ ಎಲ್ಲರೂ ಫೋಟೊ ಕ್ಲಿಕ್ಕಿಸುತ್ತಾರೆ ಅದು ಸಹಜ ಪ್ರಕ್ರಿಯೆ ಆದರೆ, ಓರ್ವ ಛಾಯಾಚಿತ್ರಗಾರನ ಕೈಯಲ್ಲಿ ಮೂಡಿದ ಚಿತ್ರ ವಿಶಿಷ್ಟವಾಗಿ ಕೂಡಿರುವದು ಎಲ್ಲರೂ ಗಮನಿಸಬಹುದು ಎಂದು ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ತಿಳಿಸಿದರು.

ಸಮೀಪದ ಭೀಮರಾಯನ ಗುಡಿ ಬಲಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ತಾಲೂಕು ಛಾಯಾಚಿತ್ರ ಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಾಚಿತ್ರಗಾರರು ಪ್ರಸ್ತುತ ಸಂದರ್ಭದಲ್ಲಿ ಫೋಟೊ ಸ್ಟುಡಿಯೋ ನಡೆಸುವದು ಕಷ್ಟಕರ ಎನ್ನಲಾಗುತಿತ್ತು. ಆದರೆ ಡಿಜಿಟಲ್ ಯುಗದಲ್ಲಿ ಫೋಟೊದಲ್ಲೂ ಹಲವಾರು ವೈಶಿಷ್ಟ್ಯತೆ ಬಂದಿರುವದರಿಂದ ಛಾಯಾಚಿತ್ರಗಾರರು ಸಹ ಡಿಜಿಟಲ್ ಯುಗಕ್ಕೆ ಹೊಂದಿಕೊಂಡು ಅಭಿವೃದ್ಧಿ ಹೊಂದಿರುವದರಿಂದ ನೂತನ ಸ್ಟುಡಿಯೋಗಳನ್ನು ಮಾಡಿಕೊಂಡು ಗ್ರಾಹಕರಿಗೆ ತಕ್ಷಣ ಬೇಕಾದ ರೀತಿಯಲ್ಲಿ ಪೋಟೊಗಳನ್ನು ತೆಗೆದು ಕೊಡುವ ಕಾರ್ಯ ನಡೆಯುತ್ತಿದೆ.

ಈ ಮೊದಲು ಫೋಟೊ ಬೇಕಾದಲ್ಲಿ ವಾರಗಟ್ಟಲೇ ಕಾಯುವ ಸ್ಥಿತಿ ಇತ್ತು. ಈಗ ಕ್ಷಣಾರ್ಧದಲ್ಲಿ ನಿಮ್ಮ ಫೋಟೊ ಮುಂದಿರುತ್ತದೆ. ಡಿಜಿಟಲೀಕರಣಗೊಂಡಿರುವ ಹಿನ್ನೆಲೆ ಛಾಯಾಚಿತ್ರಗಾರರು ಅದಕ್ಕೆ ಹೊಂದಿಕೊಂಡು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನೂತನ ಶೈಲಿ ಬಳಸಿ, ಅವರ ಕಲಾ ಕೌಶಲ್ಯವನ್ನು ಬಳಸಿ ಫೋಟೊಗ್ರಾಫಿ ಮಾಡುವ ಮೂಲಕ ತಮ್ಮ ಸೇವೆ ಮುಂದುವರೆಸಿದ್ದಾರೆ.

ಆದಾಗ್ಯು ಛಾಯಚಿತ್ರಗಾರರಿಗೆ ಸರ್ಕಾರ ಇದುವರೆಗೆ ಯಾವುದೇ ಸೌಲಭ್ಯ ಪ್ರತ್ಯೇಕವಾಗಿ ಕಲ್ಪಿಸಿಲ್ಲ. ಮುಂಬರುವ ದಿನಗಳಲ್ಲಿ ಛಾಯಾಚಿತ್ರಗಾರರಿಗೆ ಪ್ರೋತ್ಸಾಹ ನೀಡುವಂತ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸರ್ಕಾರದ ಗಮನ ಸೆಳೆಯವ ಕಾರ್ಯವನ್ನು ನಮ್ಮೂರಿನಿಂದಲೇ ಆರಂಭಸೋಣ ಎಂದು ತಿಳಿಸಿದರು.

ಸಿಪಿಐ ಹನುಮರಡ್ಡೆಪ್ಪ, ಪಿಎಸ್‍ಐ ರಾಜಕುಮಾರ ಜಾಮಗೊಂಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಿರಿಯ ಛಾಯಾಚಿತ್ರಗಾರರನ್ನು ಸನ್ಮಾನಿಸಲಾಯಿತು. ಸಣ್ಣ ನಿಂಗಣ್ಣ ನಾಯ್ಕೋಡಿ, ಕಾಶಿನಾಥ ಕಲ್ಮನಿ, ಸಂಘದ ಅಧ್ಯಕ್ಷ ಭೀಮರಡ್ಡಿ ಶಿಕಾರಿ, ಯೂಸೂಫುದ್ದೀನ್ ಖಾಜಿ, ಅರುಣಕುಮಾರ ನಾಲವಾರ, ಭೀಮಾಶಂಕರ ನಾಯ್ಕೋಡಿ, ಸೋಮನಾಥ ಪಾಲಪುರೆ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button