ವಿದ್ಯಾರ್ಥಿಗಳ ಪ್ರೀತಿಯ ಪ್ರಾಧ್ಯಾಪಕ ಡಾ.ದಾಂಡ್ರಾ
ಸೃಜನಶೀಲ ಚಿಂತಕ ಡಾ. ಬಿ. ವಿ. ದಾಂಡ್ರಾ ಕುರಿತು
-ಪ್ರೊ. ಸೂರ್ಯಕಾಂತ ಬಿ ಉಮ್ಮಾಪೂರೆ.
ನಮ್ಮ ಜ್ಞಾನದಿಂದ, ವಿವೇಕದಿಂದ ಹಾಗೂ ಶೀಲದಿಂದ ನಮಗೆ ಪ್ರಶಂಶೆ ಬರಬೇಕು ವಿನಹ ಯಾವುದೆ ಔಪಚಾರಿಕ ಪ್ರದರ್ಶನದಿಂದಲ್ಲ ಎಂಬ ಶಿಕ್ಷಣ ಚಿಂತಕ ಡಾ. ಗುರುರಾಜ ಕರ್ಜಗಿಯವರ ಈ ವಿಚಾರಗಳು ಸೂಕ್ಷ ಸಂವೇದನಾಶೀಲ, ಸೃಜನಶೀಲ ಚಿಂತಕ, ವೃತ್ತಿ ಬಧ್ಧತೆಯ ಪ್ರಾಧ್ಯಾಪಕ ಡಾ.ಬಿ.ವಿ. ದಾಂಡ್ರಾ ರವರಿಗೆ ತುಂಬಾ ಅನ್ವಯಿಸುತ್ತದೆ.

ಕಲಬುರಗಿ ವಿಶ್ವವಿದ್ಯಾಲಯದ ಗಣಕ ವಿಜ್ಞಾನ ವಿಭಾಗದಲ್ಲಿ 22 ವರ್ಷಗಳ ಕಾಲ ಗಣಕ ವಿಜ್ಞಾನ ಪ್ರಾಧ್ಯಾಪಕರಾಗಿ ತುಂಬಾ ಕ್ರೀಯಾಶೀಲತೆಯಿಂದ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅವರು 2016 ರಲ್ಲಿ ವೃತ್ತಿ ಸೇವೆಯಿಂದ ನಿವೃತ್ತಿ ಹೊಂದಿ ವಿಶ್ರಾಂತ ಬದುಕನ್ನು ಸಾಗಿಸದೆ ಮಹಾರಾಷ್ಟ್ರದ ಪುಣೆಯ ಸಿಮಬಯೋಸಿಸ್ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಡಿನ ಶೈಕ್ಷಣಿಕ ಪರಿಸರದಲ್ಲಿ ಡಾ. ಬಿ. ವಿ. ದಾಂಡ್ರಾ ರವರು ಎಲ್ಲರಿಗೂ ಬೇಕಾಗುವ ಪ್ರೀತಿಯ ಸುಸಂಸ್ಕೃತ ಸಂಪನ್ಮೂಲ ವಿದ್ವಾಂಸರಾಗಿದ್ದಾರೆ ಹಾಗೂ ಅಪಾರ ವಿದ್ಯಾರ್ಥಿಗಳ ಅಂತರಂಗದ ಪ್ರೀತಿಯ ಅಧ್ಯಾಪಕರಾಗಿದ್ದಾರೆ.
ಡಾ.ಬಿ.ವಿ. ದಾಂಡ್ರಾ ಇವರು ಕಲಬುರಗಿ ಜಿಲ್ಲೆ, ಕಲಬುರಗಿ ತಾಲೂಕಿನಲ್ಲಿ ಬರುವ ಕುಗ್ರಾಮವಾದ ಜೋಗುರಲ್ಲಿ ದಿನಾಂಕ: 01-01-1955 ರಂದು ಶ್ರೀಮತಿ ಗೌರಮ್ಮ ಮತ್ತು ಶ್ರೀ ವೀರಣ್ಣಾ ದಾಂಡ್ರಾ ಇವರ ಜೇಷ್ಠ ಪುತ್ರನಾಗಿ ಜನಿಸಿದರು. ಜೋಗುರ ಗ್ರಾಮಕ್ಕೆ ಯಾವುದೇ ತರಹದ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಇಲ್ಲದ ಆ ಕಾಲದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಅನಕ್ಷರಸ್ಥರೆ ಹೆಚ್ಚಾಗಿದ್ದರು. ಆದರೆ ಇಂದು ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ಹೊಸತಲೆಮಾರಿನವರು ಇಂಜಿನಿಯರ್ಸ್ ಮತ್ತು ಡಾಕ್ಟರ್ಸ್ ಆಗಿದ್ದಾರೆ. 2001ರಲ್ಲಿ ಡಾ.ಬಿ.ವಿ. ದಾಂಡ್ರಾವರು ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಗಳಿಸಿದ ಜೋಗುರ ಗ್ರಾಮದ ಏಕೈಕ ವ್ಯಕ್ತಿಯಾಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಡಾ. ದಾಂಡ್ರಾ ಅವರು ಆಗಿನ ನಿಷ್ಠಾವಂತ ಮುಖ್ಯ ಗುರುಗಳಾಗಿದ್ದ ಕಲ್ಲಪ್ಪಾ ಮದಗುಣಕಿ ಇವರ ಮಾರ್ಗದರ್ಶನದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ಇವರು ತಮ್ಮ ಏಳನೇ ತರಗತಿಯ ಬೋರ್ಡ್ ಪರಿಕ್ಷೆಯನ್ನು ಫರತಾಹಾಬಾದ್‍ನಲ್ಲಿ ಹಾಜರಾಗಿ, ಆ ವರ್ಷ ಬೋರ್ಡ ಪರಿಕ್ಷೆಯಲ್ಲಿ ಪ್ರತಿ ಶಾಲೆಯಿಂದ ಒಂದೊ, ಎರಡೋ ವಿದ್ಯಾರ್ಥಿಗಳಷ್ಟೆ ಪಾಸಾಗಿದ್ದರು. ಆ ಸಂದರ್ಭದಲ್ಲಿ ಜೋಗುರ ಪ್ರಾಥಮಿಕ ಶಾಲೆಯಿಂದ 27 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾದವರಲ್ಲಿ ಕೇವಲ ಮೂರೇ ಮೂರು ಜನ ಏಳನೇ ತರಗತಿಯಲ್ಲಿ ಪಾಸಾಗಿದ್ದರು, ಅದರಲ್ಲಿ ಬಿ.ವಿ. ದಾಂಡ್ರಾವರು ಒಬ್ಬರಾಗಿದ್ದರು.
ಕಡು ಬಡತನದ ಪರಿಸ್ಥಿತಿಯಲ್ಲಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಶಿಕ್ಷಣವನ್ನು ಮೊಟಕುಗೊಳಿಸುವ ನಿರ್ಧಾರ ಮಾಡಿದ್ದರು. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ದಾಂಡ್ರಾ ಅವರ ನೆರವಿಗೆ ಬಂದವರು ಭೂಸನೂರಿನ ಶ್ರೀ ನಿಂಗಣ್ಣಗೌಡ ಬೈರಪ್ಪಗೌಡ ಪಾಟೀಲರು. ಇವರು ಅದೇ ತಾನೆ ಮೂರು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪ್ರೌಢ ಶಾಲೆಯನ್ನು ಆರಂಭಿಸಿದರು.
ಆ ವರ್ಷ ಏಳನೇ ಬೋರ್ಡ ಪರಿಕ್ಷೆಯ ಫಲಿತಾಂಶ ನಿರಿಕ್ಷೆಣೆ ಮೀರಿ ಕಡಿಮೆ ಆಗಿದ್ದರಿಂದ, ಶ್ರೀ ನಿಂಗಣ್ಣಗೌಡರು ಉಚಿತ ಪ್ರಸಾದ ನಿಲಯವನ್ನು ಪ್ರಾರಂಭಿಸಿ ಪ್ರತಿ ಹಳ್ಳಿಗೆ ತಮ್ಮ ಶಾಲೆಯ ವತಿಯಿಂದ ತಂಡವೊಂದನ್ನು ಕಳಿಸಿ ಏಳನೇ ಬೋರ್ಡ ಪರಿಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಗುರುತಿಸಿ ಕರೆತರುವಂತೆಯೂ, ಅವರಿಗೆ ಎಲ್ಲವೂ ಉಚಿತವಾಗಿ (ಊಟ, ವಸತಿ ಮತ್ತು ಶಿಕ್ಷಣ) ಕೊಡುವದಾಗಿ ಬರವಸೆಯನ್ನು ಕೊಟ್ಟು ಕರೆ ತರುವಂತೆ ಆದೇಶಿಸಿದ್ದರು. ಈ ತಂಡ ಜೋಗುರಿಗೆ ಬಂದು ಗುರುತಿಸಿದ್ದು ಬಿ.ವಿ. ದಾಂಡ್ರಾ ರವರನ್ನು. ಅವರ ಪಾಲಕರಿಗೆ ಸಮಜಾಯಿಸಿ ಇವರನ್ನು ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆ ಭೂಸನೂರ ಇಲ್ಲಿ ಸೆರ್ಪಡಿಸಲಾಯಿತು. ಈ ಶಾಲೇ ದಾಂಡ್ರಾ ಅವರ ಬದುಕಿಗೆ ಹೊಸ ತಿರುವನ್ನು ನೀಡಿತು.
ಭೂಸನೂರಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿಕ್ಷಕರ ಹಾಗೂ ಆ ವಿದ್ಯಾಸಂಸ್ಥೆಯ ಸದಸ್ಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು. ದಾಂಡ್ರಾ ಅವರ ಪ್ರತಿಭೆ, ಓದಿನ ಚಟುವಟಿಕೆಗಳನ್ನು ಗಮನಿಸಿದ ಶಿಕ್ಷಕರಾದ ಎಲ್.ಎಸ್. ಉಣ್ಣೀಭಾವಿ, ಪಿ.ಜಿ. ಸಾಲಿಮಠ, ಎಸ್.ಎಸ್. ಬಿರಾದಾರ, ಬಿ.ಜಿ. ಮಲಶೆಟ್ಟಿ, ಸಿ.ಕೆ. ನಾಟಿಕಾರ ಮತ್ತು ಜಿ.ಬಿ. ಪಾಟೀಲ ಮುಂತಾದವರು ಅವರ ಓದಿಗೆ ಪ್ರೋತ್ಸಾಹಿಸುತ್ತಿದ್ದರು. ಇಂತಹ ಒಂದು ವಾತಾವರಣದಲ್ಲಿ ಮೂರು ವರ್ಷ ಕಳೆದ ಇವರು 1972ರಲ್ಲಿ ಎಸ್.ಎಸ್.ಎಲ್.ಸಿ. ಪರಿಕ್ಷೆಯಲ್ಲಿ ಎರಡನೇ ದರ್ಜೆಯಲ್ಲಿ ಪಾಸಾದರು.
ಮುಂದಿನ ಶಿಕ್ಷಣಕ್ಕೆ ಶಿಕ್ಷಕರಾದ ಎಲ್.ಎಸ್. ಊಣ್ಣಿಭಾವಿ, ಪಿ.ಜಿ. ಸಾಲಿಮಠ ಮತ್ತು ಶರಣಬಸಪ್ಪಾ ಜವಳಿ ಅವರ ಸಹಕಾರದಿಂದ ಶರಣಬಸವೇಶ್ವರದ ದಾಸೋಹದಲ್ಲಿ ಆಗಿನ ಪಿಠಾಧಿಪತಿಯಾದ ಪೂಜ್ಯ ದೊಡ್ಡಪ್ಪ ಅಪ್ಪಾವರನ್ನು ಭೇಟಿಮಾಡಿಸಿ ದಾಸೋಹದಲ್ಲಿ ಪ್ರಸಾದ ವ್ಯವಸ್ಥೆ ಮಾಡಿಸಿ ಓದಿಗೆ ಅನುಕೂಲ ಮಾಡಿಕೊಟ್ಟರು. ಪಿಠಾಧಿಪತಿ ಪೂಜ್ಯ ಡಾ. ಶರಣಬಸಪ್ಪಾ ಅಪ್ಪಾ ಅವರ ಸಹಕಾರದಿಂದ ಎರಡು ವರ್ಷ ದಾಸೋಹದಲ್ಲಿದ್ದು ಪಿ.ಯು.ಸಿ ಅಧ್ಯಯನ ಮುಗಿಸಿದರು. ನಂತರ ಮುಂದೆ ಬಿ.ಎ ಪದವಿಯಲ್ಲಿ ಗಣಿತಶಾಸ್ತ್ರ ಮೇಜರ ಹಾಗೂ ಸಂಖ್ಯಾಶಾಸ್ತ್ರ ಮೈನರ ವಿಷಯವನ್ನಾಗಿ ಅಭ್ಯಾಸ ಮುಂದುವರಿಸಿದರು.
ಜಿ.ಬಿ. ಸಜ್ಜನ ಗಣಿತ ಪ್ರಾದ್ಯಾಪಕರು, ಶ್ರೀ ಶರಣಬಸವೇಶ್ವರ ವಿಜ್ಞಾನ ಮಾಹಾವಿದ್ಯಾಲಯ, ಕಲಬುರಗಿ ಇವರ ಮಾರ್ಗದರ್ಶನದಲ್ಲಿ ಹಾಗೂ ಅವರ ಮನೆಯಲ್ಲಿ ಊಟ ವಸತಿಯೊಂದಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಿದ, ಬಿ. ವಿ. ದಾಂಡ್ರಾವರು ಬಿ.ಎ. ಪದವಿಯನ್ನು ಪ್ರಥಮ ದರ್ಜೆಯೋಂದಿಗೆ 13ನೇ ರ್ಯಾಂಕ ಪಡೆದರು. ಗಣಿತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದ ಹಾಗೂ ಪ್ರತಿಭಾವಂತರಾಗಿದ್ದ ದಾಂಡ್ರಾ ಅವರು ಶಿಕ್ಷಕರಾದ ಎಲ್.ಎಸ್. ಉಣ್ಣಿಭಾವಿ ಗುರುಗಳ ಅಕ್ಕ ಶ್ರೀಮತಿ ಸಂಗಮ್ಮಾ ಉಣ್ಣೀಭಾವಿ ಅವರ ಆರ್ಥಿಕ ಸಹಾಯದೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗಕ್ಕೆ ಸ್ನಾತಕೋತ್ತರ ಪದವಿಯ ಅಧ್ಯಯಕ್ಕೆ ಪ್ರವೇಶ ಪಡೆದರು.
ಡಾ.ಬಿ.ವಿ. ದಾಂಡ್ರಾ ಇವರು ಸಂಖ್ಯಾಶಾಸ್ತ್ರ ವಿಭಾಗದಿಂದ 1979ರಲ್ಲಿ ಎಂ.ಎ. ಪದವಿಯನ್ನು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ ಶಿಕ್ಷಕರಿಗೆ ಕೀರ್ತಿ ತಂದುಕೊಟ್ಟರು. 1979ರಲ್ಲಿ ಸಾಂಗ್ಲಿಯ ಶಾಂತಿನಿಕೇತನ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. 1983-84 ರಲ್ಲಿ ಯುಜಿಸಿ ಟೀಚರ ಫೆಲೊಸಿಪ ಅವಾರ್ಡ ಪಡೆದಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಮ್.ಎಸ್. ಚಿಕ್ಕಗೌಡರ ಮಾರ್ಗದರ್ಶನದಲ್ಲಿ ಎಂ. ಫೀಲ್ ಪದವಿಯನ್ನು ಅಧ್ಯಯನ ಮಾಡಲು ಅನುಕೂಲವಾಯಿತೆಂದು ನುಡಿಯುತ್ತಾರೆ. ತದನಂತರ ಇವರು ಶಿವಾಜಿ ವಿಶ್ವವಿದ್ಯಾಲಯ ಕೋಲ್ಹಾಪೂರದಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರೆಂದು ನಿಯುಕ್ತಿಗೊಂಡರು.
ಶಿವಾಜಿ ವಿಶ್ವವಿದ್ಯಾಲಯದಲ್ಲಿ ಬೋಧನೆಯ ಜೊತೆಗೆ ಡಾ. ಎಮ್.ಎಸ್. ಪ್ರಸಾದ ಇವರ ಮಾರ್ಗದರ್ಶನದಲ್ಲಿ ಪಿ.ಎಚ್‍ಡಿ ಪದವಿಯ ಅಧ್ಯಯನ ಮುಂದುವರಿಸಿದರು. ಈ ವೇಳೆಯಲ್ಲಿ ಸಹೋದರನ ಅಕಾಲಿಕ ಮರಣ ಮತ್ತು ತಂದೆಯವರ ಮರಣ ಇವರಿಗೆ ಅಘಾತವನ್ನುಂಟು ಮಾಡಿತು. ಆದರೂ ಎದೆಗುಂದದೆ, ಡಾ. ಎಂ.ಎಸ್. ಪ್ರಸಾದ, ಡಾ. ರಾಠಿಹಳ್ಳಿ ಆರ್.ವಿ. ಮತ್ತು ಡಾ. ಎಸ್. ಆರ್. ಕುಲಕರ್ಣಿ ಯವರ ಮಾರ್ಗದರ್ಶನಂತೆ 1993ರಲ್ಲಿ ಪಿ.ಎಚ್‍ಡಿ ಪದವಿಯನ್ನು ಪಡೆದರು. ಇವರು ಶಿವಾಜಿ ವಿಶ್ವವಿದ್ಯಾಲಯರಲ್ಲಿ ಎಮ್.ಸಿ.ಎ ಮತ್ತು ಎಮ್ ಎಸ್ಸಿ ಕೋರ್ಸ್‍ಗಳಿಗೆ ಉಪನ್ಯಾಸ ಮಾಡಿದಲ್ಲದೆ ತಮಗೆ ವಹಿಸಿದ ಜವಬ್ದಾರಿಯನ್ನು ಅತಿ ಅಚ್ಚು ಕಟ್ಟಾಗಿ ನಿರ್ವಹಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯ ಇವರನ್ನು 1995ರಲ್ಲಿ ಪ್ರವಾಚಕರೆಂದು ಎಂ.ಸಿ.ಎ ಕೋರ್ಸಗೆ ನಿಯುಕ್ತಿ ಮಾಡಿದರು. ಅಂದಿನಿಂದ ಎಮ್.ಸಿ.ಎ ವಿಭಾಗದ ಜವಾಬ್ದಾರಿಯನ್ನು ಹೊತ್ತುಕೊಂಡು ರಚನಾತ್ಮಕ ಕಾರ್ಯಗಳಮೂಲಕ ವಿಭಾಗದ ಶೈಕ್ಷಣಿಕ ಅಭಿವೃಧ್ಧಿಗೆ ಶ್ರಮಿಸಿದರು .ಇವರ ಕಾರ್ಯಕ್ಕೆ ಪ್ರಾಧ್ಯಾಪಕರಾದ ಡಾ. ಪಿ.ಎಸ್. ಹಿರೇಮಠ ಹಾಗೂ ಡಾ. ಜಿ. ಜಿ. ರಜಪೂತ ರವರು ಬೆನ್ನೆಲುಬಾಗಿ ಪ್ರ್ರೇತ್ಸಾಹನೀಡಿ ವಿಶ್ವವಿದ್ಯಾಲಯದಲ್ಲಿಯೆ ಗಣಕÀ ವಿಜ್ಞಾನ ವಿಭಾಗವು ಮಾದರಿಯಾಗಿ ಬೆಳೆಸಿದರು.
ಗಣಿತಶಾಸ್ತ್ರ ವಿಭಾಗದಿಂದ ಕಂಪ್ಯೂಟರ ವಿಜ್ಞಾನ ವಿಭಾಗ ಪ್ರತ್ಯೇಕವಾದಾಗ ಡಾ.ಬಿ.ವಿ. ದಾಂಡ್ರಾ, ಡಾ. ಪಿ.ಎಸ್. ಹಿರೇಮಠ ಮತ್ತು ಡಾ. ಜಿ.ಜಿ. ರಜಪುತ ಇವರು ವಿಭಾಗದಲ್ಲಿ ಎಂ.ಫೀಲ್ ಮತ್ತು ಪಿ.ಹೆಚ್‍ಡಿ ಕೋರ್ಸಗಳನ್ನು ಪ್ರಾರಂಭ ಮಾಡಿದರು. ಇವರೆಲ್ಲರು 22 ವರ್ಷಗಳ ಕಾಲ ವಿಭಾಗದ ಏಳಿಗೆಗಾಗಿ ದುಡಿದರು, ಇವರಲ್ಲಿ ಡಾ.ಬಿ.ವಿ. ದಾಂಡ್ರಾವರು ಪ್ರಮುಖರಾಗಿದ್ದಾರೆ.
ಡಾ. ದಾಂಡ್ರಾ ರವರ ಮಾರ್ಗದರ್ಶನದಲ್ಲಿ 15ಜನ ಎಂ.ಫೀಲ್ ಮತ್ತು 11 ಜನ ಪಿ.ಹೆಚ್‍ಡಿ ಪದವಿಯನ್ನು ಪಡೆದಿದ್ದಾರೆ. ಹೈದ್ರಾಬಾದ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಲು ಪ್ರಯತ್ನ ಪಟ್ಟವರಲ್ಲ್ಲಿ ಇವರೊಬ್ಬರು. ಇವರ ಮಾರ್ಗದರ್ಶನದಲ್ಲಿ ಅಧ್ಯಯನಮಾಡಿದ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ವಿಶ್ವವಿದ್ಯಾಲಯಗಳಲ್ಲಿ, ಪದವಿ ಕಾಲೇಜುಗಳಲ್ಲಿ, ಮಾಹಿತ ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ಕಾರ್ಯ ನಿರ್ವಹಿಸ್ಮತ್ತಿದ್ದಾರೆ.
ಪ್ರಚಾರ, ಪ್ರತಿಷ್ಠೆಗಳಿಂದ ದೂರವುಳಿದು ಸಾಧನೆಗಳ ಮೂಲಕ ಮಾತನಾಡುವ ಸಾತ್ವಿಕ ವಿದ್ವತ್ತನ್ನು ಹೊಂದಿದ್ದ ಡಾ. ದಾಂಡ್ರಾ ಅವರು ಸರಳ ಸದ್ವಿನಯಶಿಲ ಪ್ರಾಧ್ಯಾಪಕರಾದ ಅವರು ಸದ್ದು ಗದ್ದಲವಿಲ್ಲದೆ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟ ವಿಜ್ಞಾನ ಒಂದು ಮಾದರಿ ವಿಭಾಗವಾಗಿ ಹೊರಹೊಮ್ಮುವಲ್ಲಿ ತುಂಬಾ ಶ್ರಮಿಸಿದ್ದಾರೆ.
ಡಾ.ಬಿ.ವಿ. ದಾಂಡ್ರಾ ಇವರು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಂಡಳಿ ಸದಸ್ಯರು, ಪರೀಕ್ಷಾ ಮಂಡಳಿ ಸದಸ್ಯರು ಮತ್ತು ನೇಮಕಾತಿ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಬಹಳಷ್ಟು ಅಧ್ಯಯನ ಮಂಡಳಿಗಳೂ ಇವರ ಸಲಹೇ, ಸೂಚನೆಗಳನ್ನು ಪಠ್ಯ ಕ್ರಮದಲ್ಲಿ ಮತ್ತು ಎಮ್.ಫಿಲ್/ಪಿ.ಹೆದ್.ಡಿ ಕ್ರಮನಿಯಮಾವಳಿಗಳಲ್ಲಿ ಅಳವಸಿಕೊಂಡಿದ್ದಾರೆ.
ಅಲ್ಲದೇ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬಹಳಷ್ಟು ಸಮಿತಿಯ ಸದಸ್ಯೆರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.ಡಾ. ಬಿ.ವಿ ದಾಂಡ್ರಾ ರವರು 150ಕ್ಕೂ ಹೆಚ್ಚು ಪ್ರಬಂಧವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಥರದಲ್ಲಿ ಪ್ರಕಟ ಮಾಡಿದ್ದಾರೆ. ಅಲ್ಲದೇ ಮೈನರ ಮತ್ತು ಮೇಜರ ರೀಸರ್ಚ ಪ್ರೊಜೆಕ್ಟ್‍ಗಳನ್ನು ಪೂರ್ಣಗೊಳಿಸುವಲ್ಲಿ ಯಶ್ವಸಿಯಾಗಿದ್ದಾರೆ. ಇಂಥ ಒಬ್ಬ ವ್ಯಕ್ತಿ ಯಾವ ಕಪ್ಪುಚುಕ್ಕೆ ಇಲ್ಲದೆ ಪ್ರಾಧ್ಯಾಪಕ ಸೇವೆಯಿಂದ ನಿವೃತ್ತರಾಗಿರುವ ಅವರ ಕ್ರೀಯಾಶೀಲ, ಸೃಜನಾತ್ಮಕ ವ್ಯಕ್ತಿತ್ವ ನಮ್ಮಂಥ ಯುವ ಅಧ್ಯಾಪಕರಿಗೆ ಬಹಳಷ್ಟು ಅನುಕರಣಿಯವಾಗಿದೆ.
-ಪ್ರೊ. ಸೂರ್ಯಕಾಂತ ಬಿ ಉಮ್ಮಾಪೂರೆ
ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಕರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪುರ
ಸಂಚಾರಿ: 94492195285.