ಅಂಕಣ

ಭಾತೃತ್ವ, ರಾಷ್ಟ್ರೀಯ ಭಾವನೆ ಮೂಡಿಸುವದೇ ರಾಷ್ಟ್ರೀಯ ಸೇವಾ ಯೋಜನೆ

50 ವಸಂತಗಳನ್ನು ಪೂರೈಸಿದ ಎನ್ನೆಸ್ಸೆಸ್

ಸೆ.24 ಎನ್.ಎಸ್.ಎಸ್ ಸಂಸ್ಥಾಪನಾ ದಿನಾಚರಣೆ

– ರಾಘವೇಂದ್ರ ಹಾರಣಗೇರಾ
ಗ್ರಾಮೀಣ ಪುನರಚನೆ ಹಾಗೂ ಅಭಿವೃದ್ಧಿ ಕುರಿತು ಹಗಲಿರುಳು ಚಿಂತಿಸಿ ಶ್ರಮಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳುತ್ತಿದ್ದರು. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರಬೇಕೆನ್ನುವ ಉದ್ಧೇಶದಿಂದ ಗಾಂಧೀಜಿಯ ಜನ್ಮ ಶತಾಬ್ದಿಯ ನಿಮಿತ್ಯ 1969ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ 50 ವಸಂತಗಳನ್ನು ಪೂರೈsಸಿದೆ.

ವಿದ್ಯಾರ್ಥಿ ಯುವಜನರನ್ನು ಸಾಮಾಜಿಕ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಶಿಕ್ಷಣಕ್ಕೆ ಒಂದು ಸಾಮಾಜಿಕ ಸಂವೇದನೆಯ ಆಯಾಮ ದೊರಕಿಸಿಕೊಡುವುದು ಎನ್.ಎಸ್.ಎಸ್.ನ ಅನೇಕ ಉದ್ಧೇಶಗಳಲ್ಲಿ ಒಂದಾಗಿದೆ. ವಿದ್ಯಾರ್ಥಿ ಯುವಜನರಿಗೆ ಗ್ರಾಮಸ್ಥರೊಂದಿಗೆ ಬೆರೆಯಲು, ಗ್ರಾಮೀಣ ಸಮಸ್ಯೆಗಳನ್ನು ಅರಿಯಲು, ಗ್ರಾಮೀಣ ನೈರ್ಮಲ್ಯ, ಪರಿಸರ ಪ್ರಜ್ಞೆ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ತಿಳುವಳಿಕೆ ನೀಡಲು ವಿಪುಲ ಅವಕಾಶಗಳು ಎನ್.ಎಸ್.ಎಸ್. ಕಲ್ಪಿಸಿಕೊಡುತ್ತದೆ.

ಈ ಎನ್.ಎಸ್.ಎಸ್. ಮೂಲಕ ಶಿಕ್ಷಣ ಪಡೆದ ಯುವಜನರು ಮುಂದಿನ ತಮ್ಮ ಸಾಮಾಜಿಕ ಬದುಕಿನಲ್ಲಿ ಉತ್ತಮವಾದ ಬದುಕನ್ನು ಸಾಗಿಸಲು ಮತ್ತು ಬದಲಾದ ಜಾಗತಿಕ ಪರಿಸ್ಥಿತಿಯಲ್ಲಿ ಹೊಂದಿಕೊಂಡು, ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಪರಸ್ಪರ ಅರ್ಥೈಸಿಕೊಂಡು ಪರಿಹರಿಸುವುದರ ಮೂಲಕ ಸವಾಲುಗಳನ್ನು ಎದುರಿಸಿ ಹೇಗೆ ಬದುಕಬೇಕೆಂಬುದನ್ನು ಎನ್.ಎಸ್.ಎಸ್. ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ.

ನನಗಾಗಿ ಅಲ್ಲ ನಿನಗಾಗಿಯೇ ಎಲ್ಲ ಎಂಬ ಧ್ಯೇಯವಾಕ್ಯವನ್ನು ಹೊಂದಿದ ಈ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಜಾಪ್ರಭುತ್ವದ ಸಾರಾಂಶವನ್ನು ಸಾರುತ್ತದೆ. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವೆ, ಪರಸ್ಪರರನ್ನು ಅರ್ಥೈಸಿಕೊಳ್ಳುವ, ಗೌರವಿಸುವ, ಸಮಸ್ಯೆಗಳಿಗೆ ಸ್ಪಂದಿಸುವ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.

ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಕಳಕಳಿಯನ್ನುಂಟುಮಾಡಿ ಶಿಕ್ಷಣ ಸಂಸ್ಥೆಗಳ ಸುತ್ತ-ಮುತ್ತಲಿರುವ ಜನರೊಂದಿಗೆ ಕಲೆತು, ಬೆರೆತು ಕ್ರಿಯಾತ್ಮಕ ಮತ್ತು ರಚನಾತ್ಮಕ ಕೆಲಸ ಮಾಡುವುದರ ಮೂಲಕ ಸಮಾಜದ ಉಪಯೋಗಕ್ಕಾಗಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುವಂತೆ ಎನ್.ಎಸ್.ಎಸ್. ಶಿಬಿರದ ಮೂಲಕ ತರಬೇತಿ ನೀಡುತ್ತದೆ.

ಅಂದರೆ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ವಿದ್ಯಾರ್ಥಿ ಯುವಜನರನ್ನು ತೊಡಗಿಸಿಕೊಳ್ಳುವ ಹಲವಾರು ಅವಕಾಶಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ಅಷ್ಟೇ ಅಲ್ಲದೇ, ವಿವಿಧ ಜಾತಿ, ಜನಾಂಗ, ಧರ್ಮ, ಭಾಷೆ, ಲಿಂಗ ಯಾವುದೇ ಭೇದ ಮಾಡದೇ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬೆರೆತು ಕೆಲಸ ಮಾಡುವ, ಪರಸ್ಪರ ಹೊಂದಾಣಿಕೆಯಿಂದ ಜೀವಿಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಮಯ ಪ್ರಜ್ಞೆ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಿಕೆ, ಪ್ರಜಾಪ್ರಭುತ್ವದ ಮನೋಭಾವ, ಸಹಿಷ್ಣತಾ ಭಾವನೆ, ವ್ಯವಹಾರಿಕ ಕೌಶಲ್ಯ, ಪರಸ್ಪರ ಸಹಾಯ-ಸಹಕಾರ, ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹಾಕುವಿಕೆಗೆ ವೇದಿಕೆ ಒದಗಿಸುವುದು ಇತ್ಯಾದಿ ಈ ಎನ್.ಎಸ್.ಎಸ್. ಶಿಬಿರದಲ್ಲಿ ವಿದ್ಯಾರ್ಥಿ ಯುವಜನರು ಕಲಿತುಕೊಳ್ಳುತ್ತಾರೆ.

ನಮ್ಮಲ್ಲಿನ ಕ್ರಿಯಾಶೀಲತೆ, ಸೃಜನಶೀಲತೆ ಬಡಿದೆಬ್ಬಿಸುವ ಒಂದು ಉತ್ತಮ ವೇದಿಕೆಯಾಗಿದೆ. ಮತ್ತು ಜಾತಿ, ಮತ, ಪಂಥಗಳ ಭೇದವಿಲ್ಲದೆ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಿದೆ ಎನ್ನುತ್ತಾರೆ ಎನ್ ಎಸ್ ಎಸ್ ಶಿಬಿರದಲ್ಲಿ ಭಾಗವಹಿಸಿದ ವಿಧ್ಯಾರ್ಥಿನಿ ಕಾವ್ಯ ಪ್ರಕಾಶ.

ಪಟ್ಟಣದ ವಿದ್ಯಾರ್ಥಿನಿಯಾದ ನನಗೆ ಹಳ್ಳಿಯ ಬದುಕು ಮತ್ತು ಅವರ ಸಮಸ್ಯೆಗಳನ್ನು ಕುರಿತು ಅರಿತುಕೊಳ್ಳಲು ಸಾಧ್ಯವಾಯಿತು ಎಂದು ವಿಶ್ವಜ್ಯೋತಿ ನುಡಿಯುತ್ತಾಳೆ.. ಬೇರೆಬೇರೆ ವಿದ್ಯಾರ್ಥಿ ಸ್ನೇಹಿತರೊಂದಿಗೆ ಹೊಂದಾಣಿಕೆಯಿಂದ, ಸ್ನೇಹದಿಂದ ಹೇಗೆ ಬೆರೆಯಬೇಕೆಂದು ಹಾಗೂ ಸಮಯ ಪ್ರಜ್ಞೆ, ಶಿಸ್ತು, ಜವಬ್ದಾರಿ ಮುಂತಾದವುಗಳನ್ನು ಎನ್.ಎಸ್.ಎಸ್. ಶಿಬಿರವು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ಎನ್‍ಎಸ್‍ಎಸ್ ಯುವ ಸಮುದಾಯವನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ತರಬೇತಿ ನೀಡುತ್ತದೆ ವ್ಯಕ್ತಿತ್ವ ವಿಕಾಸ, ಸಾಮಥ್ರ್ಯ, ಅವಕಾಶಗಳ ಅನಾವರಣ, ಊರು-ಕೇರಿಯ ಜನರೊಂದಿಗೆ ಬೆರೆಯುವಿಕೆ, ಮತ್ತು ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆಗೆ ಪ್ರೇರಣೆ ನೀಡುವುದು, ಸಾಮಾಜಿಕ ಸಂವೇದನೆಗಳ ಮೂಲಕ ವಿದ್ಯಾರ್ಥಿ ಯುವಪೀಳಿಗೆಯಲ್ಲಿ ರಾಷ್ಟ್ರನಿರ್ಮಾಣದ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ತರವಾಗಿದೆ.

– ರಾಘವೇಂದ್ರ ಹಾರಣಗೇರಾ

ಸಮಾಜಶಾಸ್ತ್ರ ಉಪನ್ಯಾಸಕರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಹಾಪೂರ.

ಜಿ| ಯಾದಗಿರಿ ಮೊ| 9901559873

Related Articles

Leave a Reply

Your email address will not be published. Required fields are marked *

Back to top button