ಗೂಡ್ಸ್ ಬಾಡಿಗೆ ವಾಹನಗಳ ನಿಲುಗಡೆಗೆ ಸ್ಥಳವಕಾಶ ಕಲ್ಪಿಸಿ
ಗೂಡ್ಸ್ ಬಾಡಿಗೆ ವಾಹನಗಳಿಗೆ ಸ್ಥಳವಕಾಶ ಕಲ್ಪಿಸಲು ಕರವೇ ಮನವಿ
ಯಾದಗಿರಿ, ಶಹಾಪುರಃ ನಗರದಲ್ಲಿ ಗೂಡ್ಸ್ ಬಾಡಿಗೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಕಾಶ ಕಲ್ಪಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದಲ್ಲಿ ಗೂಡ್ಸ್ ಬಾಡಿಗೆ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಕಾಶವಿಲ್ಲದೆ ವಾಹನ ಚಾಲಕರು, ಮಾಲೀಕರು ಪರದಾಡುವಂತಾಗಿದೆ. ಜನರ ಹಲವಾರು ಕಾರ್ಯಗಳಿಗೆ ಗೂಡ್ಸ್ ವಾಹನ ಅಗತ್ಯವಾಗಿ ಬಳಕೆಯಾಗಲಿದ್ದು, ಸಾರ್ವಜನಿಕರು ಸಹ ತಮ್ಮ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಗೂಡ್ಸ್ ವಾಹನಕ್ಕಾಗಿ ಹುಡುಕಾಡುವಂತಾಗಿದೆ.
ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಅನುಕೂಲವಾಗುವಂತೆ ಗೂಡ್ಸ್ ಬಾಡಿಗೆ ವಾಹನಗಳಿಗೆ ಸ್ಥಳವಕಾಶ ಕಲ್ಪಿಸಬೇಕು. ನಿತ್ಯ ಬಾಡಿಗೆ ಮೇಲೆ ಬದುಕು ನಡೆಸುವ ನಮಗೆ ವ್ಯಾಪಾರವಿಲ್ಲದೆ ನಿತ್ಯದ ಬದುಕು ಸಾಗಿಸಲು ಕಷ್ಟವಾಗುತ್ತಿದೆ.
ಕಾರಣ ಕೂಡಲೇ ಅಧಿಕಾರಿಗಳು ನಗರದ ಹಲವಡೆ ಗೂಡ್ಸ್ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಇಲ್ಲವಾದಲ್ಲಿ ನಗರಸಭೆ ಕಚೇರಿ ಮುಂದೆ ಧರಣಿ ನಡೆಸಲಾಗುವದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ಭೀಮು ಶಖಾಪುರ, ಕರ್ನಾಟಕ ರಕ್ಷಣಾ ಸೇನೆಯ ಮೌನೇಶ ಸುರುಪುರ, ಸಿದ್ದು ಪಟ್ಟೇದಾರ ಸೇರಿದಂತೆ ಬಸವರಾಜ, ವಿರೇಶ ಚೌದ್ರಿ, ರವಿ, ಮಾಳಪ್ಪ, ದೇವಪ್ಪ, ಭೀಮರಾಯ, ಮಲ್ಲರೆಡ್ಡಿ ವಿಭೂತಿಹಳ್ಳಿ ಸೇರಿದಂತೆ ಗೂಡ್ಸ್ ವಾಹನ ಚಾಲಕರು ಭಾಗವಹಿಸಿದ್ದರು.