ಲುಂಬಿನಿ ವನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಪ್ರವಾಸಿ ತಾಣಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ- ವಜ್ಜಲ್
ಯಾದಗಿರಿಃ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜೊತೆಗೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್ ಹೇಳಿದರು.
ನಗರದ ಲುಂಬಿನಿ ವನದಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ “ಪ್ರವಾಸೋದ್ಯಮ ಹಾಗೂ ಉದ್ಯೋಗ ಸರ್ವರಿಗೂ ಉಜ್ವಲ ಭವಿಷ್ಯ” ಘೋಷ ವಾಕ್ಯದಡಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾದಗಿರಿ ಕೋಟೆ, ಗುರುಮಠಕಲ್ ಸಮೀಪದ ಧಬಧಬಿ ಜಲಪಾತ, ಹತ್ತಿಕುಣಿ ಜಲಾಶಯ, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ, ಬೋನ್ಹಾಳ ಪಕ್ಷಿಧಾಮ, ರಾಜನಕೌಳೂರು ಬುಡ್ಡರ ಮನೆಗಳು, ವಾಗಣಗೇರಾ ಕೋಟೆ, ಶಿಲ್ಪಕಲೆಯ ತವರೂರಾದ ಏವೂರು, ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಟೇಲರ್ ಮಂಜಿಲ್, ಮುದನೂರಿನ ದೇವರ ದಾಸಿಮಯ್ಯ, ತಿಂಥಣಿ ಮೌನೇಶ್ವರ, ಹೊಸಕೇರಾ ಬೇಟೆ ಅರಮನೆ, ಶಹಾಪುರ ಬುದ್ಧ ಮಲಗಿದ ಬೆಟ್ಟ, ವನದುರ್ಗ ಕೋಟೆ, ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಮುಂತಾದ ಪ್ರವಾಸಿ ತಾಣಗಳಿವೆ.
ಜಿಲ್ಲೆಯಲ್ಲಿ ಸಾಕಷ್ಟು ರಾಜಮನೆತನಗಳು ಆಳ್ವಿಕೆ ನಡೆಸಿವೆ. ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಈ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ನಗರದ ಲುಂಬಿನಿ ಕೆರೆಯಲ್ಲಿ ಬೋಟಿಂಗ್ ಕೂಡ ಶೀಘ್ರ ಆರಂಭವಾಗಲಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗಳನ್ನು ಕೈಗೊಳ್ಳಲು ಅವಕಾಶ ಇದೆ. ಸಿಂಗಪುರದಂತಹ ದೇಶಗಳು ಪ್ರವಾಸೋದ್ಯಮದಿಂದಲೇ ಹಣ ಸಂಪಾದನೆ ಮಾಡುತ್ತಿವೆ.
ಆದರೆ, ಅಲ್ಲಿ ಸಂಸ್ಕøತಿ ಹಾಳಾಗಿದೆ. ಭಾರತ ದೇಶದ ಕಲೆ, ಸಂಸ್ಕøತಿ ಎಲ್ಲಾ ದೇಶಗಳಿಗೂ ಮಾದರಿಯಾಗಿದೆ. ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಅಧ್ಯಕ್ಷರು ಹಾಗೂ ಇತಿಹಾಸ ತಜ್ಞರಾದ ಭಾಸ್ಕರರಾವ್ ಮುಡಬೂಳ ಅವರು ಉಪನ್ಯಾಸ ನೀಡಿ, ಜಗತ್ತು ಬೆರಗಾಗುವ ಸಂಗತಿಗಳು ನಮ್ಮ ಜಿಲ್ಲೆಯಲ್ಲಿಯೇ ಇವೆ. ಇಂಗ್ಲೆಂಡಿನ ಮಹಾರಾಣಿ ಕಿರೀಟದಲ್ಲಿರುವ ಪ್ರಸಿದ್ಧ ಕೋಯಿನೂರು ವಜ್ರ ಸಿಕ್ಕಿರುವುದು ನಮ್ಮ ಶಹಾಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ.
ಅತ್ಯಂತ ಪ್ರಬಲ ಅರಸ ಔರಂಗಜೇಬನನ್ನು ಸೋಲಿಸಿದ ಕೀರ್ತಿ ಸುರಪುರದ ಅರಸರಿಗೆ ಸಲ್ಲುತ್ತದೆ. ಇತಿಹಾಸ ತಿಳಿದುಕೊಳ್ಳದವರಿಗೆ ಭವಿಷ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಇತಿಹಾಸ ತಿಳಿದುಕೊಂಡು ಪ್ರವಾಸಿ ತಾಣಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಜನಿಕಾಂತ ಅವರು ಮಾತನಾಡಿ, ಯಾದಗಿರಿ ಜಿಲ್ಲೆಯು ಭೌಗೋಳಿಕ, ಐತಿಹಾಸಿಕ, ಧಾರ್ಮಿಕ, ಸಾಂಸ್ಕøತಿಕವಾಗಿ ಅತ್ಯಂತ ಸಂಪದ್ಭರಿತವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮ ಇಲಾಖೆಯು ಇವುಗಳ ಅಭಿವೃದ್ಧಿಯ ಜೊತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಇಲ್ಲಿಯವರೆಗೆ ಒಟ್ಟು 370 ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಲಾಗಿದೆ. ಲುಂಬಿನಿವನ ಸಂರಕ್ಷಣೆ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಅಲ್ಲದೆ, ಲುಂಬಿನಿವನದಲ್ಲಿ “ಕೃತಕ ಹಳ್ಳಿ” ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಸುರಪುರ ತಾಲ್ಲೂಕಿನ ಬೋನ್ಹಾಳ ಪಕ್ಷಿಧಾಮವನ್ನು ರಾಜ್ಯದ ಅತಿದೊಡ್ಡ ಪಕ್ಷಿಧಾಮ ಎಂದು ಘೋಷಿಸಲಾಗುತ್ತಿದೆ. ಬೋನ್ಹಾಳ ಪಕ್ಷಿಧಾಮ 676 ಎಕರೆ ವಿಸ್ತಾರವಿದೆ. ಈ ಮೊದಲು ರಂಗನತಿಟ್ಟು ಅತಿದೊಡ್ಡ ಪಕ್ಷಿಧಾಮವಾಗಿತ್ತು. ಮುಂಬರುವ ದಿನಗಳಲ್ಲಿ ಲುಂಬಿನಿ ಉತ್ಸವ ಆಚರಿಸಲಾಗುವುದು. ಯಾದಗಿರಿ ಉತ್ಸವಕ್ಕಾಗಿ 50 ಲಕ್ಷ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
2018-19ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ ಲುಂಬಿನಿವನದಲ್ಲಿರುವ ರಂಗಮಂದಿರದ ನೈಸರ್ಗಿಕ ಕೋಣೆ (ಗ್ರೀನ್ ರೂಮ್) ಮತ್ತು ಲುಂಬಿನಿ ಉದ್ಯಾನವನದ ಕೆರೆಯಲ್ಲಿ ಬೋಟಿಂಗ್ ಆರಂಭಿಸಲು ಬೋಟಿಂಗ್ ಜೆಟ್ಟಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಉದ್ಘಾಟಿಸಿದರು. ಪ್ರವಾಸೋದ್ಯಮ ಪ್ರಮೋಟರ್ ಮೇಘನಾಥ ಬೆಳ್ಳಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನವಣೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಯಮಿತ ಎಇಇ ಧನಂಜಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕಾವ್ಯಶ್ರೀ ಮತ್ತು ದಿವ್ಯಾ ಅವರು ಪ್ರಾರ್ಥಿಸಿದರು. ಗುಂಡು ಕುಂಬಾರ ಅವರು ನಾಡಗೀತೆ ಹಾಡಿದರು. ಬಸವರಾಜ ಸಿನ್ನೂರ ಅವರು ನಿರೂಪಿಸಿದರು.