ಭೀಮಾತೀರದ ಕುಖ್ಯಾತಿಯ ಭಾಗಪ್ಪ ಹರಿಜನ ಪತ್ನಿ ಅಪಘಾತದಲ್ಲಿ ಸಾವು
ಇಂಡಿಃ ಗೂಡ್ಸ್ ವಾಹನ ಹಾಗೂ ಮಹಿಂದ್ರಾ ಎಕ್ಸ್ ಯೂ ವಾಹನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಂದ್ರಾ ಎಕ್ಸ್ ಯೂ ವಾಹನದಲ್ಲಿದ್ದ ಎನ್ನಲಾದ ಭೀಮಾತೀರದ ಕುಖ್ಯಾತಿ ಭಾಗಪ್ಪ ಹರಿಜನ ಪತ್ನಿ ಶೋಭಾ ಭಜಂತ್ರಿ(45) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕಪನಿಂಬರಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಡೆದಿದೆ ಎನ್ನಲಾಗಿದೆ.
ಎಕ್ಸ್ ಯೂ ವಾಹನದ ಚಾಲಕ ಹಾಗೂ ಗೂಡ್ಸ್ ವಾಹನ ಚಾಲಕರು ಗಾಯಗೊಂಡಿದ್ದು, ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೋಭಾ ಅವರ ಮೃತದೇಹವನ್ನು ಬೆಳಗಾವಿಯ ಚಿಕ್ಕೋಡಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಗೆ ಮರಣೋತ್ತರ ಪರೀಕ್ಷೆಗೆ ಶಿಫ್ಡ್ ಮಾಡಲಾಗಿದೆ.
ಆಸ್ಪತ್ರೆ ಗೆ ಮೃತ ಶೋಭಾಳ ಗಂಡ ಭಾಗಪ್ಪ ಹರಿಜನ ಮತ್ತು ಸ್ನೇಹಿತರು ಚಿಕ್ಕೋಡಿ ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಮೃತ ಶೋಭಾ ಚಿಕ್ಕೋಡಿಯ ಪ್ರಧಾನ ನ್ಯಾಯಾಲಯದಲ್ಲಿ ಎಪಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ.