ಜೆಸ್ಕಾಂ ಅಪಘಾತ ರಹಿತ ಕಂಪನಿಯಾಗಲಿ – ಡಾ.ಆರ್.ರಾಗಪ್ರಿಯಾ
ಬಾಕಿ ಬಿಲ್ ವಸೂಲಾತಿಗೆ ನೋಟಿಸ್ ಜಾರಿ ಮಾಡಲು ಸೂಚನೆ
ಯಾದಗಿರಿಃ ವಿದ್ಯುತ್ ಕಾರ್ಯನಿರ್ವಹಿಸುವ ಪವರ್ ಮ್ಯಾನ್, ಸಹಾಯಕ ಮತ್ತು ಕಿರಿಯ ಪವರ್ ಮ್ಯಾನ್ ಕಡ್ಡಾಯವಾಗಿ ಸುರಕ್ಷತಾ ಉಪಕರಣಗಳನ್ನು ಬಳಸಬೇಕು. ಸುರಕ್ಷತೆಗೆ ಆದ್ಯತೆ ನೀಡಿ ವಿದ್ಯುತ್‍ನ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜೆಸ್ಕಾಂ ವಿಭಾಗ ಅಪಘಾತ ರಹಿತ ಕಂಪನಿಯಾಗಿ ಪರಿವರ್ತಿಸಬೇಕು ಎಂದು ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಆರ್.ರಾಗಪ್ರಿಯಾ ತಿಳಿಸಿದರು.
ಶಹಾಪುರ ತಾಲ್ಲೂಕಿನ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಸಮಯಕ್ಕೆ ವಿದ್ಯುತ್ ಬಿಲ್ಲನ್ನು ವಿತರಿಸಬೇಕು. ಜೊತೆಗೆ ಪ್ರತಿಶತ ಕಂದಾಯ ವಸೂಲಾತಿ ಮಾಡಬೇಕು. ಬಾಕಿ ಉಳಿದ ವಿದ್ಯುತ್ ಬಿಲ್ ವಸೂಲಾತಿಗೆ ನೊಟೀಸ್ ಜಾರಿ ಮಾಡಿ. ಮತ್ತು ಜಾಗೃತಿ ದಳವನ್ನು ಬಳಸಿಕೊಂಡು ವಸೂಲಾತಿ ಮಾಡಿ ಎಂದು ಸೂಚಿಸಿದರು.
ಕಳೆದ ತಿಂಗಳು ಜಿಲ್ಲೆಯಲ್ಲಿ ನೆರೆ ಹಾನಿಗೀಡಾದ ಹಳ್ಳಿಗಳಿಗೆ ವಿದ್ಯುತ್‍ನ ಪುನರ್ ವ್ಯವಸ್ಥೆ ಕಾರ್ಯಗಳನ್ನು ಮಾಡಿದ ಜೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಮತ್ತು ವಿದ್ಯುತ್ ಗುತ್ತಿಗೆದಾರರ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಂತ್ರಿಕ ನಿರ್ದೇಶಕರಾದ ಆರ್.ಜಯಕುಮಾರ, ಮುಖ್ಯ ಆರ್ಥಿಕ ಸಲಹೆಗಾರರಾದ ಅಬ್ದುಲ್ ವಾಜಿದ್, ಮುಖ್ಯಅಭಿಯಂತರರಾದ ಆರ್.ಡಿ.ಚಂದ್ರಶೇಖರ, ಅಧೀಕ್ಷಕ ಅಭಿಯಂತರರಾದ ಮೋಹನ ಕುಮಾರ, ಸಿದ್ರಾಮ ಪಾಟೀಲ್, ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ಡಿ. ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.