ಚಟ್ನಳ್ಳಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ
ಯಾದಗಿರಿ,ಶಹಾಪುರಃ ತಾಲೂಕಿನ ಚಟ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅನಿರೀಕ್ಷಿತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ ಅವರು, ಆಸ್ಪತ್ರೆಗೆ ಭೇಟಿ ನೀಡುವ ಸಾರ್ವಜನಿಕರೊಂದಿಗೆ ವೈದ್ಯರು ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಅಲ್ಲದೆ ಹಾಜರಿ ಪುಸ್ತಕ ಪರಿಶೀಲಿಸಿ ವೈದ್ಯರು ಮತ್ತು ಇತರೆ ಸಿಬ್ಬಂದಿ ಬಗ್ಗೆ ವಿಚಾರಿಸಿದರು ಎನ್ನಲಾಗಿದೆ. ನಿತ್ಯ ಆಸ್ಪತ್ರೆಗೆ ಎಷ್ಟು ಜನ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಯಾವ ಸೌಲಭ್ಯ ನೀಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರೋಗಿಗಳನ್ನು ಪ್ರೀತಿಪೂರ್ವಕವಾಗಿ ಮಾತನಾಡಿ ಚಿಕಿತ್ಸೆ ನೀಡಬೇಕು. ಔಷಧಿ ಸೇವನೆ ಬಗ್ಗೆ ಜನರಿಗೆ ತಿಳಿಯುವಂತೆ ಹೇಳಬೇಕು. ಕರ್ತವ್ಯದಲ್ಲಿ ಸೇವಾಮನೋಭಾವ ಇರಲಿ ಎಂದು ಎಚ್ಚರಿಸಿದರು.
ಮುಂಚಿತವಾಗಿ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಎಂಎಸ್ಐಎಲ್ ಆರಂಭಿಸಲಿರುವ ವೈನ್ಸ್ ಅಂಗಡಿ ಆರಂಭಕ್ಕೆ ಸೂಕ್ತ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ನಂತರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.