ಸಾಲ ಮನ್ನಾ ಹಣ ರೈತರ ಖಾತೆಗೆ ಜಮಾ ಮಾಡಲು ಆಗ್ರಹ
ಡಿಸಿಸಿ ಬ್ಯಾಂಕ್ ಮುಂದೆ ಪ್ರಾಂತ ರೈತ ಸಂಘ ಪ್ರತಿಭಟನೆ
ಬ್ಯಾಂಕ್ ಮ್ಯಾನೇಜರರಿಂದ ಉಳ್ಳವರಿಗೆ ಹಣ ನೀಡಿಕೆ ಆರೋಪ
ಯಾದಗಿರಿ, ಶಹಾಪುರಃ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೂ ಇನ್ನೂ ಮನ್ನಾ ಹಣ ರೈತರ ಖಾತೆಗೆ ಜಮಾ ಮಾಡದೆ ಇಲ್ಲಿನ ಡಿಸಿಸಿ ಬ್ಯಾಂಕ್ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಪ್ರಾಂತ ರೈತ ಸಂಘ ಡಿಸಿಸಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಆನೇಗುಂದಿ ಮಾತನಾಡಿ, ಪ್ರತಿ ನಿತ್ಯ ನೂರಾರು ಜನ ರೈತರು ನಸುಕಿನ ಜಾವದಲ್ಲಿಯೇ ಪಟ್ಟಣಕ್ಕೆ ಆಗಮಿಸಿ ಡಿಸಿಸಿ ಬ್ಯಾಂಕ್ ಮುಂದೆ ಸಾಲು ಗಟ್ಟಿ ನಿಂತರು ಬ್ಯಾಂಕ್ ಸಿಬ್ಬಂದಿ ಹಣ ನೀಡುತ್ತಿಲ್ಲ ಎಂದು ಆರೋಪಿಸಿದರು.
ಇಲ್ಲಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಒಳಗಿಂದೊಳಗೆ ತಮ್ಮ ಸಂಬಧಿಕರಿಗೆ ಮತ್ತು ಆತ್ಮೀಯರಿಗೆ ಹಣವನ್ನು ನೀಡುತ್ತಿದ್ದು, ಕಮಿಷನ್ ಗಿಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಾಲುಗಟ್ಟಿ ನಿಂತ ಸಣ್ಣ ರೈತರಿಗೆ ಬಿಡಿಗಾಸು ನೀಡುತ್ತಿಲ್ಲ. ಹಣ ಬಂದಿಲ್ಲ ಎಂದು ಸುಳ್ಳು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ನಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಇದರಿಂದ ಬಡ ರೈತರು ಪರದಾಡುವಂತಾಗಿದೆ. ಕೂಡಲೇ ರೈತಾಪಿ ಜನರಿಗೆ ನ್ಯಾಯ ಒದಗಿಸಬೇಕು. ಡಿಸಿಸಿ ಬ್ಯಾಂಕ್ ಗೆ ಬಿಡುಗಡೆಯಾದ ಒಟ್ಟು ಹಣದಲ್ಲಿ ಎಷ್ಟು ಜನ ರೈತರಿಗೆ ನೀಡಿದ್ದಾರೆ ಎಂಬುದು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರು.
ಅಲ್ಲದೆ ಯಾದಗಿರಿ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ೧೨೯ ಕೋಟಿ ರೂ.ಗಳ ಅವ್ಯವಹಾರಗಳ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ರೈತರಿಗೆ ಎಕರೆಗೆ ೧ ಲಕ್ಷ ಬಡ್ಡಿ ರಹಿತ ಸಾಲ ನೀಡಬೇಕು. ಭೀಮಾ ಫಸಲ ಯೋಜನೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮತ್ತು ಕೇಂದ್ರ ಸರ್ಕಾರ ರೈತರಿಗೆ ಕಂಟಕವಾದ ಆರ್‌ಸಿಇಎಫ್ ಕಾಯ್ದೆ ಒಪ್ಪಂದ ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಕುರಿತು ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸಾಗರ ಮಾತನಾಡಿದರು. ತಾಲೂಕಾ ಕಾರ್ಯದರ್ಶಿ ಬಸವರಾಜ ಭಜಂತ್ರಿ, ಎಐಯುಟಿಸಿ ಮುಖಂಡ ಜೈಲಾಲ ತೋಟದಮನಿ, ಹೊನ್ನಪ್ಪ ಮಾನ್ಪಡೆ, ಭೀಮರಾಯ ಪೂಜಾರಿ, ಅಂಬಲಯ್ಯ ಹಣಮಂತ್ರಾಯಗೌಡ, ವಿಜಯ ರಾಠೋಡ್, ಸೇರಿದಂತೆ ರೈತರು ಭಾಗವಹಿಸಿದ್ದರು.