ಜ್ಞಾನದಿಂದ ದೇವರನ್ನು ಕಂಡ ಕನಕದಾಸರು -ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ
ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ
ಯಾದಗಿರಿಃ ಸಂತ ಶ್ರೇಷ್ಠ ಭಕ್ತ ಕನಕದಾಸರು ತಮ್ಮ ಅಪಾರ ಜ್ಞಾನ ಮತ್ತು ಭಕ್ತಿ ಮಾರ್ಗದಿಂದ ದೇವರನ್ನು ಕಂಡರು. ಸಮಾಜದ ಏಳ್ಗೆಗಾಗಿ ಕೀರ್ತನೆಗಳನ್ನು ಬರೆದ ಅವರ ತತ್ವಾದರ್ಶಗಳು ನಮಗೆ ದಾರಿದೀಪವಾಗಿವೆ ಎಂದು ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲಿ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಕನಕದಾಸರು ನಮ್ಮ ನಾಡಿನ ಪುಣ್ಯಪುರುಷರು. ಅವರ ಭಕ್ತಿಯ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು. ಭಕ್ತಿಯಿಂದಲೇ ಶ್ರೀಕೃಷ್ಣನ ದರ್ಶನ ಪಡೆದರು. ಸಮಾಜದಲ್ಲಿಯ ನ್ಯೂನ್ಯತೆಗಳನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದಿದರು. ಹಾಲುಮತ ಸಮಾಜವು ಹಿಂದೂ ಧರ್ಮದಲ್ಲಿಯೇ ಅತೀ ಸೂಕ್ಷ್ಮ ಮತ್ತು ಮುಗ್ದ ಸಮಾಜವಾಗಿದೆ. ಮತ್ತೊಬ್ಬರ ಹಿತವನ್ನು ಬಯಸುವ ಇವರು ಕಾಯಕವನ್ನು ನಂಬಿ ಜೀವನ ನಡೆಸುತ್ತಾರೆ. ಸಮಾಜದ ಜನರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಪ್ರಭಾರಿ ಅಪರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ.ಚವ್ಹಾಣ್ ಅವರು ನೀಡಿದ ಕನಕದಾಸರ ಜಯಂತ್ಯೋತ್ಸವ ಸಂದೇಶವನ್ನು ಸಮಾರಂಭದಲ್ಲಿ ಓದಿದರು. ದಾಸ ಶ್ರೇಷ್ಠರಾದ ಕನಕದಾಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅವರ ಕೀರ್ತನ, ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗೋಣ ಎಂದು ಹೇಳಿದರು.
ಸಾಹಿತಿ ಶ್ರೀಶೈಲ ಪೂಜಾರಿ ಅವರು ಉಪನ್ಯಾಸ ನೀಡಿ, ಕನಕದಾಸರ ಜೀವನ ಸಂದೇಶ ಕರ್ನಾಟಕದ ಸಾಂಸ್ಕøತಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವುದಾಗಿದೆ. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಬಾಡ ಎಂಬ ಗ್ರಾಮದಲ್ಲಿ ಭೀರಪ್ಪ ನಾಯಕ ಮತ್ತು ಬಚ್ಚಮ್ಮ ದಂಪತಿಗೆ ಕನಕದಾಸರು ಜನಿಸುತ್ತಾರೆ. ಕನಕದಾಸರ ಮೊದಲಿನ ಹೆಸರು ತಿಮ್ಮಪ್ಪ ಎಂದು ತಿಳಿಸಿದರು.
ಕನಕದಾಸರು ದೇವಸ್ಥಾನ ಕಟ್ಟಿಸಲು ಭೂಮಿ ಪೂಜೆ ಮಾಡುವಾಗ 7 ಕುಪ್ಪರಗಿಯಷ್ಟು ಬಂಗಾರ ಸಿಗುತ್ತದೆ. ಅದೆಲ್ಲವನ್ನು ಕೆರೆ ಕಟ್ಟಿಸಲು ಮತ್ತು ಸಮಾಜದ ಇನ್ನಿತರ ಕಲ್ಯಾಣ ಕಾರ್ಯಗಳಿಗೆ ಬಳಸುತ್ತಾರೆ. ಅಂದಿನಿಂದ ಕನಕ ಎಂದು ಹೆಸರಾದರು. ತಂದೆ-ತಾಯಿ-ಮಗನನ್ನು ಕಳೆದುಕೊಂಡ ನಂತರ ಅವರು ಸಂಸಾರದ ವ್ಯಾಮೋಹವನ್ನು ತೊರೆದು ದಾಸರಾಗುತ್ತಾರೆ ಎಂದು ತಿಳಿಸುತ್ತಾ, ಕನಕದಾಸರ ಹಲವು ಪವಾಡಗಳನ್ನು ವಿವರಿಸಿದರು.
ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ವಿಶ್ವನಾಥ ನೀಲಹಳ್ಳಿ, ಸಮಾಜದ ಮುಖಂಡರಾದ ಸಿದ್ದನಗೌಡ ಕಾಡಂನೋರ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ಕಲಾತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಗುರುಪ್ರಸಾದ ವೈದ್ಯ ಅವರು ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಕನಕ ವೃತ್ತದಿಂದ ವಿದ್ಯಾಮಂಗಲ ಕಾರ್ಯಾಲಯದವರೆಗೆ ಡೊಳ್ಳು ಕುಣಿತ ಹಾಗೂ ಕಲಾತಂಡದೊಂದಿಗೆ ಕನಕದಾಸರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.