KPSC ಸದಸ್ಯರಾಗಿ ಡಾ.ರಂಗರಾಜ ವನದುರ್ಗ ನೇಮಕ
ಡಾ.ರಂಗರಾಜ ವನದುರ್ಗ ಲೋಕಸೇವಾ ಆಯೋಗ ಸದಸ್ಯರಾಗಿ ನೇಮಕ
ವಿವಿ ಡೆಸ್ಕ್ಃ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ)ರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೋ.ರಂಗರಾಜ ವನದುರ್ಗ ಅವರನ್ನು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ತಮ್ಮ ಪ್ರದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಿಸಿ ಆಧಿಸೂಚನೆ ಹೊರಡಿಸಿದ್ದಾರೆ.
ಇವರ ಜೊತೆಗೆ ಸವದತ್ತಿಯ ಕೆಎಲ್ಇ ಶಿಕ್ಷಣ ಸಂಸ್ಥೆಯ ಎಸ್ ವಿಎಸ್ ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಎಂ.ಬಿ.ಹೆಗ್ಗಣ್ಣನವರ ಅವರನ್ನು ಸಹ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಿಸಿದ್ದಾರೆ.
ಡಾ.ರಂಗರಾಜ ವನದುರ್ಗ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಗ್ರಾಮದವರು. ಅಲ್ಲದೆ ಕಲಬರ್ಗಿ, ಯಾದಗಿರಿ ಜಿಲ್ಲೆಯಲ್ಲಿ ಸಾಹಿತ್ಯಕವಾಗಿ ಸಾಕಷ್ಟು ಕೃಷಿ ಮಾಡಿದ್ದವರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಪರಿಚಿತರಾದ ಅವರು ಉತ್ತಮ ಬರಹಗಾರರು, ಮಾತುಗಾರರು ಆಗಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ. ಸಾಹಿತ್ಯಕವಾಗಿ ಅವರು ಹೆಸರು ಈ ಭಾಗದಲ್ಲಿ ಸಾಕಷ್ಟಿದೆ. ಸಗರನಾಡಿನ ಭಾಗದ ರಂಗರಾಜ ವನದುರ್ಗ ಅವರನ್ನು ನೇಮಿಸಿರುವದರಿಂದ ಸಗರನಾಡಿನ ಭಾಗದ ಜನರಲ್ಲಿ ಸಹಜವಾಗಿ ಸಂತಸ ತಂದಿದೆ.