ಶಹಾಪುರ ರಸ್ತೆ ವಿಭಜಕ ಮಧ್ಯೆ ಬಿಟ್ಟ ತಿರುವು ಬಂದ್‍ಃ ಸಾರ್ವಜನಿಕರ ವಿರೋಧ
ರಸ್ತೆ ವಿಭಜಕ ಮಧ್ಯೆ ಬಿಟ್ಟ ತಿರುವುಗಳ ಬಂದ್‍ಗೆ ಸಾರ್ವಜನಿಕರ ವಿರೋಧ
ಶಹಾಪುರಃ ನಗರದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ. ನಗರದ ರಸ್ತೆ ವಿಭಜಕ ಮಧ್ಯ ಅಲ್ಲಲ್ಲಿ ಬಿಟ್ಟಿರುವ ತಿರುವುಗಳಲ್ಲಿ ಕೆಲವೊಂದು ಬಿಟ್ಟು ಉಳಿದೆಲ್ಲವನ್ನು ಬಂದ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ವಿರೋಶ ವ್ಯಕ್ತವಾದ ಘಟನೆ ನಡೆದಿದೆ.
ನಗರದ ಜೀವೇಶ್ವರ ಕಲ್ಯಾಣ ಮಂಟಪದ ಎದುರುಗಡೆ ರಸ್ತೆ ವಿಭಜಕ ಮಧ್ಯ ವಾಹನ ತಿರುವಿಗೆ ಬಿಟ್ಟ ಜಾಗದಲ್ಲಿ ಅಡ್ಡವಾಗಿ ಗೋಡೆ ನಿರ್ಮಾಣ ಮಾಡಲು ಮುಂದಾಗಿರುವದರಿಂದ ಜಮಾವಣೆಗೊಂಡ ನಾಗರಿಕರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.
ಹಳೇ ಬಸ್ ನಿಲ್ದಾಣದಿಂದ ಸಿಬಿ ಕಮಾನ್‍ವರೆಗೂ ಮೂರು ಅಡ್ಡ ಮಾರ್ಗಗಳನ್ನು ಬಿಡಲಾಗಿದೆ. ಇದೀಗ ಅವುಗಳನ್ನು ಮುಚ್ಚುವ ಮೂಲಕ ಅಪಘಾತ ತಡೆಗೆ ಕ್ರಮಕ್ಕೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ತಾಲೂಕು ಆಡಳಿತ, ನಗರಸಭೆ ಕಾಮಗಾರಿಗೆ ಮುಂದಾಗಿತ್ತು ಎನ್ನಲಾಗಿದೆ. ಆದರೆ ಸಾರ್ವಜನಿಕರು ಸಿಬಿ ಕಮಾನ್‍ದಿಂದ ಬಸವೇಶ್ವರ ವೃತ್ತದವರೆಗೆ ಎಲ್ಲೂ ಅಡ್ಡಲಾಗಿ ಮಾರ್ಗ ಬಿಡದೆ ಹೋದಲ್ಲಿ ನಾಗರಿಕರ ಸಂಚಾರಕ್ಕೆ ಅನಾನುಕೂಲವಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವೇಶ್ವರ ಕಲ್ಯಾಣ ಮಂಟಪ ಎದುರು ಮಾರ್ಗ ಬಿಡದೇ ಹೋದರೆ ಜನರಿಗೆ ತೊಂದರೆ ಆಗಲಿದೆ. ಮದುವೆ, ಇತರೆ ಸಭೆ ಸಮಾರಂಭಗಳಲ್ಲಿ ಬಸವೇಶ್ವರ ವೃತ್ತದವರೆಗೆ ಹೋಗಿ ಹಿಂದುರಿಗಿ ಬರಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದಿರಂದ ಜನರಿಗೆ ತುಂಬಾ ತೊಂದರೆಯಾಗಲಿದೆ. ಇದು ಅವೈಜ್ಞಾನಿಕ ನಿರ್ಣಯವಾಗಿದೆ ಎಂದು ಜನರು ಆರೋಪಿಸಿದ್ದಾರೆ. ಕೂಡಲೇ ಈ ಕಾಮಗಾರಿ ಕೈಬಿಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.