ಹೊಟೇಲ್, ದಾಭಾಗಳಲ್ಲಿ ಈರುಳ್ಳಿ ಮಾಯ.! ಜನೇವರಿ ವೇಳೆಗೆ ಪ್ರತ್ಯಕ್ಷ ಸಾಧ್ಯತೆ
ಈರುಳ್ಳಿ ಎರಚುವ ಮುನ್ನವೇ ಕಣ್ಣೀರು.!
ಬೆಂಗಳೂರು: ಈರುಳ್ಳಿ ದರ ಗಗನಕ್ಕೇರುತ್ತಲೇ ಇದೆ. ಪ್ರಸ್ತುರ ಈರುಳ್ಳಿ ದರ 100ರ ಗಡಿ ದಾಟಿದೆ. ಸಹಜವಾಗಿ ಈರುಳ್ಳಿಕೊಳ್ಳುವ ಗ್ರಾಹಕನ ಮೊಗದಲ್ಲಿ ನಗು ಮಾಯವಾಗಿದೆ. ಇದಲ್ಲದೇ ದಾಭಾ, ಹೊಟೇಲ್ ಮತ್ತು ಖಾನಾವಳಿಗಳಲ್ಲಿ ಊಟಕ್ಕೆ ಕುಳಿತಾಗ ಮೊದಲು ತಂದಿಡುವದೇ ಈರುಳ್ಳಿ ಪ್ಲೇಟ್. ಆದರೆ ಇದೀಗ ಯಾವ ಹೊಟೇಲ್ ಗಳಲ್ಲಿ ಈರುಳ್ಳಿ ನೀಡುವದಿಲ್ಲ.
ಬದಲಾಗಿ ಸೌತೆಕಾಯಿ, ಟೊಮೆಟೊ ಮಾತ್ರ ತಂದಿಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವಡೆ ಹೊಟೇಲ್ ಗಳಲ್ಲಿ ಈರುಳ್ಳಿ ಪ್ಲೇಟ್ ಗೆ 20 ರೂ. ಎಂದು ನಾಮಫಲಕ ರಾರಾಜಿಸುತ್ತಿವೆ. ಅಲ್ಲದೆ ಈರುಳ್ಳಿ ದೋಸೆಗಳಂತು ಮಾಯವೇ ಆಗಿವೆ.
ಹೀಗಾಗಿ ಈರುಳ್ಳಿ ದೋಸೆ ಕೇಳಿದ್ರೆ ಇಲ್ಲವೆಂಬ ಮಾತು ಬಹುತೇಕ ಹೋಟೆಲ್ಗಳಲ್ಲಿ ಕೇಳಿ ಬರುತ್ತಿದೆ. ಇದಲ್ಲದೇ ಕೆಲವು ಹೋಟೆಲ್ಗಳಲ್ಲಿ ಈರುಳ್ಳಿ ದೋಸೆಗಳಿಗೆ ದುಪಟ್ಟು ಹಣ ಇಟ್ಟು ಗ್ರಾಹಕರನ್ನು ಸಂತೃಪ್ತಿಗೊಳಿಸಲಾಗುತ್ತಿದೆ ಎನ್ನಲಾಗಿದೆ.
ಇನ್ನು ಈ ಬಾರಿ ಈರುಳ್ಳಿ ದರದಲ್ಲಿ ಇಷ್ಟರ ಮಟ್ಟಿನ ಬೆಲೆ ಹೆಚ್ಚಳವಾಗುವುದಕ್ಕೆ ಪ್ರಮುಖ ಕಾರಣ ಈ ಬಾರಿ ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಕಳೆದ ತಿಂಗಳು ಹೆಚ್ಚು ಮಳೆಯಾದ ಪರಿಣಾಮ ಮಳೆಗೆ ಈರುಳ್ಳಿ ಬೆಳೆ ನೆನೆದು ಹಾಳಾಗಿದೆ. ಹಲವಡೆ ಮಳೆ ನೀರಿನಲ್ಲಿ ಈರುಳ್ಳಿ ಬೆಳೆ ಕೊಚ್ಚಿ ಹೋಗಿದೆ. ಇನ್ನು ಕೆಲವು ಕಡೆ ಈರುಳ್ಳಿ ನೀರಿನಲ್ಲಿ ನೆನೆದಿದೆ ಎನ್ನಲಾಗಿದೆ.
ಇದಲ್ಲದೇ ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದೆ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. ಡಿಸೆಂಬರ್ ಕೊನೆ ಅಥವಾ ಜನವರಿ ವೇಳೆಗೆ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು ಆ ವೇಳೆಯಲ್ಲಿ ಈರುಳ್ಳಿ ಬೆಲೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.