ವಿಕಲಚೇತನರು, ಹಿರಿಯ ನಾಗರಿಕರು ಕುಟುಂಬಕ್ಕೆ ಭಾರವಲ್ಲ- ನ್ಯಾ.ಶಿವನಗೌಡ
ಯಾದಗಿರಿಃ ವಿಶ್ವ ವಿಕಲಚೇತನರ ದಿನಾಚರಣೆ
ಯಾದಗಿರಿಃ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಕುಟುಂಬಕ್ಕೆ ಬಾರ ಎನ್ನುವ ದೃಷ್ಟಿಯಿಂದ ನೋಡಲಾಗುತ್ತದೆ. ಅವರು ಕುಟುಂಬಕ್ಕೆ ಬಾರವಲ್ಲ. ಅವರನ್ನು ಮಾನವೀಯ ದೃಷ್ಟಿಯಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಶಿವನಗೌಡ ಅವರು ಹೇಳಿದರು.
ನಗರದ ಜಿಲ್ಲಾ ಬಾಲಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಎಲ್ಲಾ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಕಲಚೇತನರನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಅವರನ್ನು ಸರಿಯಾಗಿ ನೋಡದಿದ್ದರೆ ಅದು ಶಾಪವಾಗುತ್ತದೆ. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಸರಕಾರ ಮಾಸಾಶನ ನೀಡುತ್ತದೆ. ವಿಕಲಚೇತನರ ಏಳ್ಗೆಗಾಗಿ ಇರುವ ಅನುದಾನವನ್ನು ಇಲಾಖೆಗಳು ಪ್ರಾಮಾಣಿಕವಾಗಿ ನೀಡಬೇಕು. ವಿಕಲಚೇತನರು ಸರಕಾರದ ಸವಲತ್ತುಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಸಲಹೆ ನೀಡಿದರು.
ಸಾಮಾನ್ಯವಾಗಿ ಬಿಸಿಲು ಇಲ್ಲದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಕಲಾಂಗರು ಕಂಡುಬರುತ್ತಾರೆ. ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದ್ದರೂ ವಿಕಲಚೇತನರು ಇದ್ದಾರೆ. ಬಾಲ್ಯ ವಿವಾಹ, ಬಡತನ, ಅಪೌಷ್ಟಿಕತೆ ಇದಕ್ಕೆ ಕಾರಣ. ಮಹಿಳೆಯರು ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡುತ್ತಿಲ್ಲ. ಸರಿಯಾದ ಚಿಕಿತ್ಸೆ, ಮಾತ್ರೆ ಹಾಗೂ ಔಷಧಿ ನೀಡಲು ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಅವರು ಮಾತನಾಡಿ, ಭಾರತ ಸಂವಿಧಾನದ 21ನೇ ಅನುಚ್ಛೇದದ ಪ್ರಕಾರ ಪ್ರತಿಯೊಬ್ಬರು ಘನತೆ-ಗೌರವದಿಂದ ಬದುಕುವ ಹಕ್ಕಿದೆ. ಹಿರಿಯ ನಾಗರಿಕರು ಹಾಗೂ ವಿಕಲಾಂಗರಿಗೆ ಆದ್ಯತೆಯ ಮೇರೆಗೆ ಬಸ್ ಮತ್ತು ರೈಲ್ವೆಗಳಲ್ಲಿ ಪ್ರಯಾಣಿಸುವಾಗ ಆಸನ ಕಾಯ್ದಿರಿಸಿದೆ. ಸರಕಾರ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 1 ಲಕ್ಷ ರೂ. ವರೆಗೆ ಸಹಾಯಧನ ನೀಡುತ್ತದೆ. ಇದರ ಉಪಯೋಗ ಪಡೆದು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ವಿಕಲಚೇತನರ ರಕ್ಷಣೆಗಾಗಿ ಕಾನೂನಿನಲ್ಲಿ ಮಹತ್ವವಾದ ಅವಕಾಶ ಕಲ್ಪಿಸಲಾಗಿದೆ. ವಿಕಲಾಂಗರ ಮೇಲೆ ದೈಹಿಕ ದೌರ್ಜನ್ಯ, ಅವರ ಆಸ್ತಿ ಕಸಿದುಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ, ಇಲ್ಲವೆ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಒಬ್ಬ ವಕೀಲರನ್ನು ನೇಮಕ ಮಾಡಿ ಅವರಿಗೆ ಉಚಿತ ಕಾನೂನು ಸೇವೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನರು ತಮ್ಮ ಬಗ್ಗೆ ಕೀಳರಿಮೆ ಹೊಂದಬಾರದು. ವಿಕಲಾಂಗತೆ ಇರುವುದು ದೇಹಕ್ಕೆ ಹೊರತು, ಮನಸ್ಸಿಗಲ್ಲ. ಮನಸ್ಸಿದ್ದರೆ ಗುರಿ ಸಾಧನೆಗೆ ವಿಕಲಾಂಗತೆ ಅಡ್ಡಿಯಾಗುವುದಿಲ್ಲ. ಶ್ರಮಕ್ಕೆ ತಕ್ಕಂತೆ ಪ್ರತಿಫಲ ಇರುತ್ತದೆ. ವಿಕಲಚೇತನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಉದಾಹರಣೆಗಳಿವೆ. ಅಧಿಕಾರಿಗಳು ವಿಕಲಚೇತನರ ಬಗ್ಗೆ ಕಾಳಜಿವಹಿಸಿ ಸರಕಾರದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.