ಶಹಾಪುರಃ ಬಸ್ ಪಲ್ಟಿ 8 ಜನರಿಗೆ ತೀವ್ರ ಗಾಯ
ಬಸ್ ಪಲ್ಟಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ಯಾದಗಿರಿಃ ಎದುರುಗಡೆಯಿಂದ ಅತಿ ವೇಗದಿಂದ ಬರುತ್ತಿದ್ದ ಬೈಕ್ ಸವಾರನೊಬ್ಬನ ಪ್ರಾಣ ಉಳಿಸಲು ಹೋದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮ ಸಮೀಪದಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ.
ದೇವದುರ್ಗಾದಿಂದ ಕಲಬುರ್ಗಿಗೆ ಹೊರಟ್ಟಿದ್ದ ಕೆಎಸ್ಆರ್ಟಿಸಿ ಬಸ್ಸೊಂದು ಶಹಾಪುರ ಮಾರ್ಗವಾಗಿ ಕಲಬುರ್ಗಿಗೆ ಹೊರಟಿರುವಾಗ ಮದ್ರಿಕಿ ಗ್ರಾಮ ಸಮೀಪ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬಸ್ನಲ್ಲಿದ್ದ 8 ಜನ ಪ್ರಯಾಣಿಕರು ತೀವ್ರ ಗಾಯಗೊಂಡಿದ್ದು, ಹಲವರು ಸಣ್ಣಪುಟ್ಟ ಗಾಯಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಚಾಲಕ ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಬಸ್ ಪಲ್ಟಿ ಹೊಡೆದಿದೆ ಎನ್ನಲಾಗಿದೆ. ಚಾಲಕ ನಾಗಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇನ್ನೋರ್ವ ಬಾಲಕಿ ಫಾತಿಮಾ ಎಂಬಾಕೆಗೂ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿದೆ. ಸಿದ್ದು ಮಾವನೂರ ಎಂಬ ಪ್ರಯಾಣಿಕನಿಗೂ ಬೆನ್ನು ಮತ್ತು ಕೈಗೆ ಬಲವಾದ ಪೆಟ್ಟು ಬಿದ್ದಿದ್ದು ಗಾಯಾಳುಗಳೆಲ್ಲರನ್ನು ಜೇವರ್ಗಿ ಹಾಗೂ ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಸೂಕ್ತ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೀಮರಾಯನ ಗುಡಿ ಪಿಎಸ್ಐ ರಾಜಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.