ಹುಚ್ಚು ನಾಯಿ ಮೃತಪಟ್ಟಿದೆ ಆತಂಕ ಬೇಡ- ಶಿವಪೂಜೆ
ರಾತ್ರಿಯೇ ಹುಚ್ಚು ನಾಯಿ ಹುಡುಕಿ ಕೊಲ್ಲಲಾಗಿದೆ ಆತಂಕ ಬೇಡ- ಶಿವಪೂಜೆ
ಯಾದಗಿರಿ,ಶಹಾಪುರಃ ನಿನ್ನೆ ನಗರದಲ್ಲಿ ಹುಚ್ಚು ನಾಯಿ ಕಡಿತಕ್ಕೆ 9 ಜನರು ಆಸ್ಪತ್ರೆಗೆ ದಾಖಲಾಗಿದ್ದ ಪರಿಣಾಮ ನಗರದಲ್ಲಿ ಆತಂಕ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಸಿಬ್ಬಂದಿಗೆ ರಾತ್ರಿಯೇ ಆ ನಾಯಿಯನ್ನು ಹುಡುಕಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದರು.
ತಕ್ಷಣವೇ ಕಾರ್ಯಪ್ರವೃತ್ತವಾದ ನಗರಸಭೆ ಸಿಬ್ಬಂದಿ ತಮ್ಮ ಜತೆ ನಗರದ ನಾಯಿ ಹಿಡಿಯುವ ನುರಿತ ಹಲವರನ್ನು ಕರೆದುಕೊಂಡು ಬುಧವಾರ ರಾತ್ರಿಯಿಡಿ ಹುಚ್ಚುನಾಯಿಯನ್ನು ಹುಡುಕಾಟ ನಡೆಸಿ ಹುಚ್ಚು ನಾಯಿ ಹಿಡಿದು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ನಗರಸಭೆ ಸಿಬ್ಬಂದಿ ಹಾಗೂ ತಂಡ ಹುಚ್ಚು ನಾಯಿ ಪತ್ತೆಗಾಗಿ ನಗರದ ಎಲ್ಲೆಡೆ ಹುಡುಕಾಟ ನಡೆಸುವ ಸಂದರ್ಭ ಇಲ್ಲಿನ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಈ ನಾಯಿ ಸಿಕ್ಕಿದ್ದು ಅದನ್ನು ಹೊಡೆದು ಕೊಲ್ಲಲಾಗಿದೆ.
ನಾಗರಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಹುಚ್ಚು ನಾಯಿ ಹಾವಳಿಗೆ ಮಕ್ಕಳು ಸೇರಿದಂತೆ ಪಾಲಕರು ಆತಂಕಗೊಂಡಿದ್ದರು.
ನಿನ್ನೆಯಿಂದ ಮಕ್ಕಳನ್ನು ಹೊರಗಡೆ ಆಟವಾಡಲು ತಾಯಂದಿರಲ್ಲಿ ಹೆದರಿಕೆ ಉಂಟಾಗಿತ್ತು. ಪ್ರಸ್ತುತ ನಗರಸಭೆ ಕಾರ್ಯಾಚರಣೆಯಿಂದ ಹುಚ್ಚು ನಾಯಿ ಮೃತಪಟ್ಟ ಸುದ್ದಿ ತಿಳಿದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ನಗರಸಭೆ ಸಿಬ್ಬಂದಿ ಕ್ರಮಕ್ಕೆ ನಾಗರಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.