ಶಹಾಪುರಃ 189 ನೇ ಬಲಿದಾನ ದಿವಸ-ಪಂಜಿನ ಮೆರವಣಿಗೆ
ಯಾದಗಿರಿ, ಶಹಾಪುರಃ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 189 ನೇ ಬಲಿದಾನ ದಿವಸ ಅಂಗವಾಗಿ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಚರಬಸವೇಶ್ವರ ಕಮಾನ್ ದಿಂದ ಬಸವೇಶ್ವರ ವೃತ್ತದವರೆಗೆ ಪಂಜಿನ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶರಣಪ್ಪ ಸಲಾದಪುರ, ಸಂಗೊಳ್ಳಿ ರಾಯಣ್ಣನ ವೀರಾವೇಶ ಆತನ ಶೌರ್ಯ ಎಂದಿಗೂ ಮರೆಯುವಂತಿಲ್ಲ. ಅಂತಹ ಮಹಾನ್ ಪುರುಷರ ಜನ್ಮವೆತ್ತ ಈ ಗಂಡುಮೆಟ್ಟಿನ ನಾಡಿನಲ್ಲಿರುವ ನಾವೆಲ್ಲ ದೇಶ ಸೇವೆಗೆ ಸದಾ ಸಿದ್ಧರಿರಬೇಕು.
ರಾಯಣ್ಣನವರು ಈ ದೇಶದ ಯುವಕರಿಗೆ ಸ್ಪೂರ್ತಿಯಾಗಿದ್ದು, ಯುವಕರು ಇತಿಹಾಸವನ್ನು ಓದಬೇಕು. ದೇಶಕ್ಕಾಗಿ ಬಲಿದಾನವಾದ ರಾಯಣ್ಣನಂತಹ ಹಲವಾರು ಜನರನ್ನು ಇಂದು ಸ್ಮರಿಸಬೇಕಿದೆ. ಆ ನಿಟ್ಟಿನಲ್ಲಿ ಇಂದು ಬಲಿದಾನ ದಿವಸ ಆಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಿರುವದು ಉತ್ತಮ ಕಾರ್ಯವಾಗಿದೆ.
ನಮಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟು ಬಲಿದಾನವಾದ ಮಹಾತ್ಮರನ್ನು ನಿತ್ಯ ನೆನೆಯಬೇಕಿದೆ. ಈ ಕುರಿತು ಮುಂದಿನ ಪೀಳಿಗೆಗೆ ಮಹಾತ್ಮರ ಕುರಿತು ಚರಿತ್ರೆ, ಇತಿಹಾಸ ತಿಳಿಸುವ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ರವಿ ರಾಜಾಪುರ, ಮಾಳಿಂಗರಾಯ ಹಳಿಸಗರ, ಮಹೇಶ ರಸ್ತಾಪುರ, ದೇವು.ಭೀ.ಗುಡಿ ಸೇರಿದಂತೆ ಇತರರಿದ್ದರು.