ಸಂಚಾರಿ ನಿಯಮಗಳ ಪಾಲನೆಯಾದಲ್ಲಿ ಜೀವರಕ್ಷಣೆ ಸಾಧ್ಯ-ಡಿವೈಎಸ್ಪಿ ಹೊಗಿಬಂಡಿ
ಸಂಚಾರಿ ನಿಯಮ ಪಾಲನೆ ಜೀವ ರಕ್ಷಣೆಗೆ ಪ್ರೇರಣೆ
ಶಹಾಪುರ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹ 2020
ಯಾದಗಿರಿ,ಶಹಾಪುರಃ ಪ್ರತಿನಿತ್ಯ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಹುಣಸಗಿ ಸೇರಿದಂತೆ ಇತರೆ ಭಾಗಗಳಲ್ಲಿ ಒಂದಿಲ್ಲೊಂದು ಅಪಘಾತ ನಡೆದಿರುತ್ತದೆ ನಿತ್ಯ ಕನಿಷ್ಟ ಒಂದು ಜೀವವಾದರೂ ಹೋಗಿರುವ ಸುದ್ದಿ ತಾವೆಲ್ಲ ಗಮನಿಸಿದ್ದೀರಿ ಅದನ್ನು ಸಮರ್ಪಕವಾಗಿ ತಡೆಯುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಡಿವೈಎಸ್‍ಪಿ ವೆಂಕಟೇಶ ಹೊಗಿಬಂಡಿ ತಿಳಿಸಿದರು.
ನಗರ ಠಾಣೆಯಲ್ಲಿ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗೂಡ್ಸ್ ಆಟೋಗಳು ನಿಯಮ ಉಲ್ಲಂಘಿಸಿ ಸಂಚಾರ ನಡೆಸುತ್ತವೆ. ಗೂಡ್ಸ್ ಆಟೋಗಳು ಪ್ಯಾಸೆಂಜರ್ ಹಾಕುವಂತಿಲ್ಲ. ಆದಾಗ್ಯು ಪ್ಯಾಸೆಂಜರ್ ಹಾಕಿಕೊಳ್ಳುತ್ತಾರೆ ಇದು ಕಾನೂನು ಉಲ್ಲಂಘನೆ. ಇನ್ಮುಂದೆ ಎಲ್ಲಿಯಾದರೂ ಗೂಡ್ಸ್ ಆಟೋಗಳು ಪ್ಯಾಸೆಂಜರ್ ತುಂಬಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು.
ಮತ್ತು ನಗರ ಪ್ರದೇಶಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸಲು ಆಟೋ ಬಳಕೆ ಜಾಸ್ತಿ ಇದೆ. ಕಾನೂನು ಪ್ರಕಾರ ನ್ಯಾಯಾಲಯದ ಆದೇಶದಂತೆ ಆಟೋಗಳಲ್ಲಿ ಶಾಲಾ ಮಕ್ಕಳನ್ನು ಬಿಡುವಂತಿಲ್ಲ. ಸಮರ್ಪಕವಾಗಿ ರಸ್ತೆ ಸಂಚಾರ ನಿಯಮ ಅನುಸರಿಸಬೇಕು. ಎಲ್ಲರೂ ಕ್ರಮಬದ್ಧವಾಗಿ ರಸ್ತೆ ಸಂಚಾರಿ ನಿಯಮ ಪಾಲನೆ ಮಾಡಿದ್ದಲ್ಲಿ ನಿತ್ಯ ಒಂದು ಜೀವ ಉಳಿಯಲಿದೆ. ಓರ್ವ ಮನುಷ್ಯ ಬದುಕುಳಿಯಲಿದ್ದಾನೆ.
ಅಪಘಾತಗಳ ತಡೆಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಹಲವಾರು ಕ್ರಮಕೈಗಳನ್ನು ಕೈಗೊಳ್ಳುತ್ತಿದ್ದಾರೆ. ಆದಾಗ್ಯು ಅಪಘಾತ ತಡೆ ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಆಟೋ ಸೇರಿದಂತೆ ವಾಹನ ಸವಾರರು ಚಾಲಕರು ಮತ್ತು ಪ್ರಯಾಣಿಕ ಸಹಕಾರ ಮತ್ತು ಕಾನೂನು ಪಾಲನೆ ಮಾಡಿದ್ದಲ್ಲಿ ಅಪಘಾತ ತಡೆ ಕಾರ್ಯ ಯಶಸ್ಸು ಸಾಧಿಸಲು ಸಾಧ್ಯವಿದೆ.
ಮನುಷ್ಯ ಜೀವದ ಹಂಗು ತೊರೆದು ಆಟೋ ಇತರೆ ವಾಹನಗಳ ಟಾಪ್ ಮೇಲೆ ಸಂಚರಿಸುತ್ತಿರುವದು ನೋಡಿದರೆ ಬೇಸರ ತರಿಸುತ್ತಿದೆ. ಜನರಿಗೆ ಸ್ವಲ್ಪವಾದರೂ ಪ್ರಾಣಭಯ ಬೇಡವೇ.? ತಾವು ಟಾಪ್ ಮೇಲೆ ಕುಳಿತುಕೊಳ್ಳುವದಲ್ಲದೆ ಮಕ್ಕಳನ್ನು ಸಹ ಕರೆದುಕೊಂಡು ಹೋಗುತ್ತಾರೆ ಈ ಕುರಿತು ಚಿಂತಿಸಬೇಕಿದೆ. ಎಲ್ಲರೂ ಕಾನೂನು ಪಾಲನೆ ಮಾಡಿ ಆಗ ಎಲ್ಲವೂ ತಹಬಂದಿಗೆ ಬರಲಿದೆ ಎಂದು ಸಲಹೆ ನೀಡಿದರು. ಶಾಲಾ ಆಟೋ ವಾಹನಗಳ ಮೇಲೆ ಶಾಲಾ ವಾಹನ ಎಂದು ಬರೆಸಬೇಕು. ಎಲ್ಲರೂ ಸಂಚಾರಿ ನಿಯಮ ಪಾಲನೆ ಮಾಡಬೇಕು ಇಲ್ಲವಾದಲ್ಲಿ ನಿಯಮನುಸಾರ ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಗ್ರಾಮೀಣ ಭಾಗ ಸಿಪಿಐ ಶ್ರೀನಿವಾಸ ಅಲ್ಲಾಪುರ ಮಾತನಾಡಿ, ಸಂಚಾರಿ ನಿಯಮ ಪಾಲನೆ ಮಾಡಿ ಎಂದು ಪ್ರತಿ ವರ್ಷ ಹೇಳುತ್ತಲೇ ಬರುತ್ತೇವೆ. ಜನರು ಆಟೋ ಚಾಲಕರು ಕಾರ್ಯಕ್ರಮದಲ್ಲಿ ಕೇಳೋದೋ ಇಲ್ಲೇ ಬಿಟ್ಟು ಹೋಗುವಂತ ಕಾರ್ಯ ನಡೆಂಯುತ್ತಿದೆ. ಕಾರಣ ಆಟೋ ಚಾಲಕರು ಎಲ್ಲರೂ ಪರವಾನಿಗೆ ಪಡೆಯಬೇಕು. ಆಟೋಗಳು ಪೊಲೀಸರ ಕೈಗೆ ಸಿಕ್ಕಲ್ಲಿ ಅಕ್ರಮ ಚಾಲನೆಗೆ ಸಮರ್ಪಕ ದಂಡ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಸಿಪಿಐ ಹನುಮರಡ್ಡೆಪ್ಪ, ಭೀಮರಾಯನ ಗುಡಿ ಪಿಎಸ್‍ಐ ರಾಜಕುಮಾರ ಜಾಮಗೊಂಡ, ಸ್ಥಳೀಯ ಪಿಎಸ್‍ಐ ಚಂದ್ರಕಾಂತ ಮ್ಯಾಕಲೆ, ಗೋಗಿ ಠಾಣೆ ಪಿಎಸ್‍ಐ ಒಡೆಯರ್ ಉಪಸ್ಥಿತರಿದ್ದರು.