ಪ್ರಮುಖ ಸುದ್ದಿ

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಜಿಪಂ ಅಧ್ಯಕ್ಷ ಅಸಮಾಧಾನ

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ
ಯಾದಗಿರಿಃ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಂಯಲ್ಲಿ ಸಾಗುತ್ತಿದ್ದು, ಎಲ್ಲಾ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೆಆರ್‍ಐಡಿಎಲ್, ನಿರ್ಮಿತಿ ಕೇಂದ್ರ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್ ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ನಿರ್ಮಿತಿ ಕೇಂದ್ರದಿಂದ ನಡೆಯುವ ಕಾಮಗಾರಿಗಳು ಹಲವೆಡೆ ಪೂರ್ಣಗೊಂಡಿಲ್ಲ. ಅಲ್ಲದೇ ಸುರಪುರ ತಾಲ್ಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿದ್ದು, ಮರು ನಿರ್ಮಾಣದ ಕೆಲಸಗಳು ಆಗಿರುವುದಿಲ್ಲ. ಇನ್ನು ಜಿಲ್ಲೆಯಲ್ಲಿರುವ ವಸತಿ ನಿಲಯಗಳಲ್ಲಿ ಬೆಡ್, ಕಾಟ್ ಹಾಗೂ ಕಾಂಪೌಂಡ್ ಸಮಸ್ಯೆಗಳಿದ್ದು, ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ಜೊತೆಗೆ ತಿಂಗಳಲ್ಲಿ ಕನಿಷ್ಠ 5 ಬಾರಿ ಆಯಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಅವರು ನಿರ್ದೇಶಿಸಿದರು.

ರೈತರ ಆತ್ಮಹತ್ಯೆ, ಹಾವು ಕಡಿತ, ಆಕಸ್ಮಿಕ ಸಾವು, ಬಣವೆ ನಷ್ಟದ ಪರಿಹಾರಗಳು ನೀಡುವುದಿದ್ದಲ್ಲಿ ಶೀಘ್ರ ಪರಿಹಾರ ಧನ ವಿತರಿಸಬೇಕು. ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳು ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡುವ ಜೊತೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಇನ್ನು ದೇವದಾಸಿ ಪುನರ್ವಸತಿ ಯೋಜನೆಯಲ್ಲಿ ಈಗಾಗಲೇ ಇರುವ ಫಲಾನುಭವಿಗಳಿಗಷ್ಟೇ ಯೋಜನೆ ಲಾಭ ಕೊಡಬೇಕು. ದೇವದಾಸಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.

ಯುವಜನೋತ್ಸವ, ಯುವಜನ ಮೇಳದಂತಹ ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವ ಬದಲು ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡರೆ ಸಾರ್ವಜನಿಕರಿಗೆ ಗ್ರಾಮೀಣ ಕಲೆಗಳ ಪರಿಚಯವಾಗುತ್ತದೆ. ಸ್ಪರ್ಧೆಗಳನ್ನು ಮಾತ್ರ ಕ್ರೀಡಾಂಗಣದಲ್ಲಿ ಆಯೋಜಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಸುಚೇತಾ ನೆಲವಗಿ ಅವರಿಗೆ ತಿಳಿಸಿದರು.

ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸ್ವಚ್ಛತೆ ಕುರಿತಂತೆ ಅರಿವು ಮೂಡಿಸಬೇಕು. ಇನ್ನು ಕೆಲ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳು ಹಳೆಯದಾಗಿ ಜೋತು ಬಿದ್ದಿವೆ. ಕೆಲವು ಕಟ್ ಆಗಿ ಬೀಳುತ್ತಿದ್ದು, ಅವುಗಳನ್ನು ಸರಿಪಡಿಸಬೇಕು. ಜೊತೆಗೆ ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್‍ವೆಲ್ ಹಾಕಿಸಿದ ಫಲಾನುಭವಿಗಳಿಗೆ ಮೂರ್ನಾಲ್ಕು ವರ್ಷಗಳಿಂದ ವಿದ್ಯುತ್ ಸಂಪರ್ಕ ನೀಡಿಲ್ಲ ಎಂಬುದಾಗಿ ಸಾರ್ವಜನಿಕ ದೂರುಗಳು ಬರುತ್ತಿವೆ. ಶೀಘ್ರ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಅವರು ಸೂಚಿಸಿದರು.

ಫಲಾನುಭವಿಗಳಿಗೆ ಸಾಲ ವಿತರಿಸಿ: ಸರ್ಕಾರದ ವಿವಿಧ ಯೋಜನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಿತರಣೆ ಮಾಡುವಲ್ಲಿ ವಿನಾಃ ಕಾರಣ ವಿಳಂಬ ನೀತಿ ಅನುಸರಿಸುತ್ತಿರುವುದು ಕಂಡುಬರುತ್ತಿದೆ. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಿ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಕೈಜೋಡಿಸಬೇಕು ಎಂದು ಅವರು ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಿವಲಿಂಗಪ್ಪ ಪುಟಗಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭೀಮರೆಡ್ಡಿ ಗೌಡ ಅವರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ ಕರಿಗಾರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸುನೀಲ್ ಬಿಸ್ವಾಸ್, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button