ಪ್ರಮುಖ ಸುದ್ದಿ

ಬಂಜಾರ ಸಮಾಜ ಕೃಷಿ, ಶಿಕ್ಷಣ ಅಭಿವೃದ್ಧಿಗೆ ಒತ್ತು ನೀಡಲಿ- ದರ್ಶನಾಪುರ

ಸಂತ ಸೇವಾಲಾಲ ಮಹಾರಾಜರ 281 ಜಯಂತ್ಯುತ್ಸವ ಭವ್ಯ ಮೆರವಣಿಗೆ
ಶೈಕ್ಷಣಿಕ ಮತ್ತು ಕೃಷಿ ಅಭಿವೃದ್ದಿಯತ್ತ ಗಮನಹರಿಸಿ – ದರ್ಶನಾಪುರ

ಯಾದಗಿರಿ, ಶಹಾಪುರಃ ಶರಣ, ಸಂತ ಸತ್ಪುರುಷರ ಜಯಂತಿಗಳು ಕೇವಲ ಒಂದು ದಿನ ಆಚರಣೆಗೆ ಸೀಮಿತಗೊಳ್ಳದೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕಿನತ್ತ ಹೆಜ್ಜೆಯಾಕಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ಬಂಜಾರ ಸಮಾಜ ಆಶ್ರಯದಲ್ಲಿ ನಡೆದ ಸಂತ ಸೇವಾಲಾಲ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಸಂತ ಸೇವಾಲಾಲರ ಜೀವನ ಮತ್ತು ಬದುಕಿನ ಬಗ್ಗೆ ಅರಿತುಕೊಂಡು ಸೇವಾಲಾಲರ ಮಾರ್ಗದಲ್ಲಿ ನಡೆದುಕೊಂಡರೆ ಜೀವನ ಪಾವನವಾಗುವದು. ಈ ಭಾಗದಲ್ಲಿ ಬಂಜಾರ ಸಮಾಜ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾರಣ ಅದಕ್ಕೆ ಉತ್ತೇಜನ ನೀಡಬೇಕಿದೆ. ಹಲವಾರು ನೂತನ ಕೃಷಿ ತಂತ್ರಗಾರಿಕೆಯನ್ನು ಬಳಸಿಕೊಂಡು ಆಧುನಿಕ ಯಂತ್ರೋಪಕರಣ ಸಹಕಾರ ಸಹಾಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕಿದೆ.

ಅಲ್ಲದೆ ಶೈಕ್ಷಣಿಕವಾಗಿಯೂ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸಮಾಜದ ಮುಖಂಡರ ಆಸಕ್ತಿವಹಿಸಿ ಕೆಲಸ ಮಾಡಬೇಕು.
ತಾಂಡಾಗಳಲ್ಲಿ ಶೈಕ್ಷಣಿಕ ಕುರಿತು ಜಾಗೃತಿ ಮೂಡಿಸಬೇಕು. ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರಿಗೆ ಸಮಗ್ರ ಮಾಹಿತಿ ನೀಡಬೇಕು. ಸರ್ಕಾರ ಯೋಜನೆಗಳನ್ನು ಸಾಕಾರಗೊಳಿಸಕೊಳ್ಳುವ ಕುರಿತು ಸಮಾಜದ ಹಿರಿಯರು ಶೈಕ್ಷಣಿಕ ಅರ್ಹತೆ ಹೊಂದಿದವರು ಸಮಾಜದ ಅಭಿವೃದ್ಧಿಗೆ ಸಮಯ ನೀಡಬೇಕು ಎಂದು ಸಲಹೆ ನೀಡಿದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಾರಣಗೇರಾ ತಾಂಡಾದ ಸಂತ ಸೇವಾಲಾಲ ದೇವಾಸ್ಥಾನದ ಲಿಂಬಾಜಿ ಮಹಾರಾಜರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಚತೆಯನ್ನು ತಹಶೀಲ್ದಾರ ಜಗನ್ನಾಥರಡ್ಡಿವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಪಿಐ ಹನುಮರಡ್ಡೆಪ್ಪ, ಸಮಾಜದ ಮುಖಂಡರಾದ ಶಿವರಾಮ ಚವ್ಹಾಣ, ಜಿಪಂ ಮಾಜಿ ಸದಸ್ಯ ಮಾನಸಿಂಗ್ ಚವ್ಹಾಣ, ಜಿಪಂ ಸದಸ್ಯ ಕಿಷನ್ ರಾಠೋಡ್, ತಾಪಂ ಸದಸ್ಯ ಬಾಷುನಾಯ್ಕ ರಾಠೋಡ್, ಬದ್ದು ನಾಯ್ಕ, ರವಿ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ರೇಖು ಚವ್ಹಾಣ ನಿರೂಪಿಸಿ ವಂದಿಸಿದರು.

281 ನೇ ಸಂತ ಸೇವಾಲಲಾರ ಜಯಂತಿ ಇದಾಗಿದ್ದು, ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ನಗರದ ಹೊಸ ತಹಸೀಲ್ ಕಚೇರಿಯಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಗಮನ ಸೆಳೆಯಿತು. ಅಲ್ಲದೆ ನೂರಾರು ಜನ ಮಹಿಳೆಯರು, ಯುವತಿಯರು ಕುಂಭ ಕಳಸ ಹೊತ್ತಿದ್ದು, ಮೆರವಣಿಗೆಯುದ್ದಕ್ಕೂ ಭಕ್ತಿ ಶ್ರದ್ಧೆಯ ಮೆರಗು ನೀಡಿತು. ತಾಲೂಕಿನ ಹಳ್ಳಿ, ತಾಂಡಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button