ಶುಕ್ರವಾರ ಸಿದ್ದಿ ಪುರುಷ ವಿಶ್ವಾರಾಧ್ಯರ ಮಹಾ ರಥೋತ್ಸವ
ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಶ್ರೀವಿಶ್ವಾರಾಧ್ಯರ ರಥೋತ್ಸವವು ಫೆ.28 (ಶುಕ್ರವಾರ) ಸಂಜೆ 6.30ಕ್ಕೆ ನಡೆಯುವ ಹಿನ್ನಲೆಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಭಕ್ತರ ದಂಡು ತಂಡೋಪ ತಂಡವಾಗಿ ಹರಿದು ಬರುತ್ತಿದೆ.
ನಾಡಿನ ಮೂಲೆ ಮೂಲೆಗಳಿಂದ ಮಾತ್ರವಲ್ಲ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಿಂದಲೂ ಭಕ್ತರು ವಿಶ್ವಾರಾಧ್ಯರ ಜಾತ್ರೆಯಲ್ಲಿ ಪಾಲ್ಗೊಂಡು ಅವರ ದರ್ಶನಾರ್ಶಿವಾದ ಪಡೆಯಲು ಭಕ್ತಿಯಿಂದ ಆಗಮಸುತ್ತಿದ್ದಾರೆ.
ಕೆಲ ಹಳ್ಳಿಗಳ ಭಜನಾ ತಂಡದವರು ಪಾದಯಾತ್ರೆಯ ಮೂಲಕ ವಿಶ್ವಾರಾಧ್ಯರ ನಾಮಸ್ಮರಣೆ ಮಾಡುತ್ತ ಭಜಿಸುತ್ತ, ಭಜನೆ ಮಾಡುತ್ತಾ ವಿಶ್ವಾರಾಧ್ಯರ ಸೂಕ್ಷೇತ್ರ ಅಬ್ಬೆತುಮಕೂರಿನೆಡೆಗೆ ನಡೆದು ಬರುತ್ತಿದ್ದಾರೆ. ಶ್ರೀಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ಸೇರುವ ಜಾತ್ರೆಗಾಗಿ ಎಲ್ಲ ಸಿದ್ಧತೆಗಳು ಸಂಪೂರ್ಣಗೊಂಡಿವೆ. ಮಾನವ ಧರ್ಮ ಸಮಾವೇಶ ನಡೆಯುವ ಬನ್ನಿ ಬಸವ ಅನುಭವ ಮಂಟಪದಲ್ಲಿ ಶರಣ ಸಕ್ರೆಪ್ಪಗೌಡ ವೇದಿಕೆ ಈಗಾಗಲೇ ಸಿದ್ಧಗೊಂಡಿದ್ದು, ಶ್ರೀಮಠದ ಆವರಣದಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿದ್ದು, ಜಾತ್ರೆಯ ಸಡಗರ ಕಳೆಗಟ್ಟಿದೆ.
ಜಾತ್ರೆಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಠದ ಎರಡೂ ಕಡೆಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಆರೋಗ್ಯ ಕೇಂದ್ರವನ್ನು ಮಠದ ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ. ವಿಶ್ವಗಂಗಾ ಗೆಳೆಯರ ಬಳಗ ಮತ್ತು ವಿಶ್ವಾರಾಧ್ಯರ ಸಕಲ ಸೇವಾ ಸಮಿತಿಗಳು ಹಾಗೂ ಅಬ್ಬೆತುಮಕೂರಿನ ಮತ್ತು ಸುತ್ತಮುತ್ತಲಿನ ವಿಶ್ವಾರಾಧ್ಯರ ಸಮಸ್ತ ಸದ್ಭಕ್ತರು ಜಾತ್ರೆಯ ಸಿದ್ಧತೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ