ರೋಗಿಗಳ ಸೇವೆ ಪೂಜೆಯಷ್ಟೇ ಫಲದಾಯಕಃ ಕನ್ಯಾಕೋಳೂರ ಶ್ರೀ
ಯಾದಗಿರಿಃ ವೈದ್ಯಕೀಯ ಸೇವೆಯು ಸರ್ವ ಶ್ರೇಷ್ಠತೆಯನ್ನು ಪಡೆದಿದೆ ಎಂದು ಕನ್ಯಾಕೋಳೂರ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಗುರುವಾರ ಜಿಲ್ಲೆಯ ಗುರುಮಠಕಲ್ ನಗರದಲ್ಲಿ ನಡೆದ ತಿರುಮಲ ಕೇರ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದ ವೈದ್ಯೋನಾರಾಯಣ ಎಂದು ವೈದ್ಯರನ್ನು ದೈವ ಸಮಾನವಾಗಿ ಕಾಣಲಾಗಿದೆ. ಹಾಗೆ ರೋಗಿಗಳ ಸೇವೆಯು ಕೂಡ ದೇವರ ಪೂಜೆಯಷ್ಟೆ ಫಲವನ್ನು ಕೊಡುತ್ತದೆ. ದೇವರೆಂದು ನಂಬಿ ಬಂದ ರೋಗಿಗಳ ವಿಶ್ವಾಸಕ್ಕೆ ಪೂರಕವಾಗಿ ವೈದ್ಯರು ಚಿಕಿತ್ಸೆ ನೀಡುವುದು ಅವರ ವೃತ್ತಿಧರ್ಮವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ಅವರು ಮಾತನಾಡುತ್ತಾ, ಆಧುನಿಕತೆಯ ಭರಾಟೆಯಲ್ಲಿ ಮನುಷ್ಯ ಅನೇಕ ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದಾನೆ. ಒತ್ತಡವನ್ನು ತಾನಾಗಿಯೇ ಮೇಲೆ ಎಳೆದುಕೊಳ್ಳುತ್ತಿದ್ದಾನೆ.
ಈ ನಿಟ್ಟಿನಲ್ಲಿ ದೈನಂದಿನ ಬದುಕಿನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯಅವಶ್ಯವಾಗಿದೆ. ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚದ ಚಿಕಿತ್ಸಾ ಪದ್ದತಿಯನ್ನು ಸುಧಾರಿಸಿಕೊಳ್ಳಲಿ. ಬಡವರಿಗೆ ಹೊರೆಯಾಗದಂತೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವಂತಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ಭಾಗರೆಡ್ಡಿ, ಡಾ. ವಿನೋದರೆಡ್ಡಿ ಇಟಕೆ, ಡಾ. ಸುಧಾರೆಡ್ಡಿ, ಡಾ. ವಿ.ಸಿ. ಮೈತ್ರಿ, ಮಲ್ಲಿಕಾರ್ಜುನ ಅರುಣಿ, ಜಿ. ತಮ್ಮಣ್ಣ ಮತ್ತಿತರರು ಇದ್ದರು.